ಬೆಂಗಳೂರು: ಒಂದು ಕಾಲದಲ್ಲಿ ಪರಮಾಪ್ತರೆನಿಸಿಕೊಂಡಿದ್ದ ಮುನಿರತ್ನ ಅವರ ಜಾತಿನಿಂದನೆ ನಡೆಯ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅಚ್ಚರಿ ಮೂಡಿಸಿದ್ದಾರೆ.
ಮುನಿರತ್ನ ಅವರ ಜಾತಿನಿಂದನೆ ಹೇಳಿಕೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಭಾಗವಹಿಸಿದ್ದರು. ಅನಂತರ ಮಾತನಾಡಿ, ಶಾಸಕರಾದವರ ಬಾಯಲ್ಲಿ ಇಂತಹ ಮಾತುಗಳು ಬರಬಾರದು ಎಂದರು.
ಎಸ್.ಟಿ.ಸೋಮಶೇಖರ್ ಬಿಜೆಪಿಯಿಂದ ಶಾಸಕರಾಗಿದ್ದು, ಆಗಾಗ ಕಾಂಗ್ರೆಸ್ ಕಡೆಗೆ ಒಲವು ತೋರಿಸುತ್ತಿದ್ದಾರೆ. ಈ ನಡುವೆ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈಗಲೂ ಅಧಿಕೃತವಾಗಿ ಬಿಜೆಪಿಯಲ್ಲಿಯೇ ಇದ್ದರೂ, ಬಿಜೆಪಿ ಶಾಸಕನ ವಿರುದ್ಧ ಪ್ರತಿಭಟನೆ ನಡೆಸಿ, ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ.
ಎಸ್.ಟಿ.ಸೋಮಶೇಖರ್ ಅವರ ಈ ನಡೆ ಮುನಿರತ್ನ ಅವರನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಬಿಜೆಪಿಗೆ ಇರಿಸುಮುರಿಸು ತಂದೊಡ್ಡಿದೆ ಎನ್ನಬಹುದು. ಈ ಮುಜುಗರ ತಪ್ಪಿಸಿಕೊಳ್ಳಲು ಬಿಜೆಪಿ ನಡೆಯೇನು ಎಂಬುದು ಇದೀಗ ಕುತೂಹಲ ಮೂಡಿಸಿದೆ.
ನಗರದ ಇನ್ನಿತರ ಒಕ್ಕಲಿಗ ಶಾಸಕರು, ಅದರಲ್ಲೂ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಡಾ.ಅಶ್ವತ್ಥ ನಾರಾಯಣ ಮುನಿರತ್ನ ಪರ ವಾದ ಮಂಡನೆ ಮಾಡುತ್ತಿದ್ದರೆ, ಸೋಮಶೇಖರ್ ಮುನಿರತ್ನ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ನಮ್ಮ ಕ್ಷೇತ್ರದ ದಲಿತ ಸಂಘಟನೆ ಮುಖಂಡರು ನನಗೆ ಮನವಿ ಮಾಡಿಕೊಂಡರು. ಒಕ್ಕಲಿಗ ಸಮುದಾಯಕ್ಕೆ ಅವರ ಹೇಳಿಕೆಯಿಂದ ಅವಮಾನವಾಗಿದೆ. ಜತೆಗೆ ಮಹಿಳೆಯರ ಗೌರವಕ್ಕೆ ಧಕ್ಕೆಯಾಗಿದೆ. ನನಗೆ ಪಕ್ಷಕ್ಕಿಂತ ನನ್ನ ಕ್ಷೇತ್ರದ ಜನರು ಮುಖ್ಯ. ಹೀಗಾಗಿ, ನಾನು ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇನೆ ಎಂದು ಸಮರ್ಥನೆ ಮಾಡಿಕೊಂಡರು.