ಕ್ರೀಡೆ ಸುದ್ದಿ

ಕಾಲ್ತುಳಿತ ಮರಣಮೃದಂಗ ಕೇಸ್: RCB ಮಾರ್ಕೆಟಿಂಗ್ ಚೀಫ್ ನಿಖಿಲ್ ಸೋಸಲೆಗೆ ಮಧ್ಯಂತರ ಜಾಮೀನು!

Share It

ಬೆಂಗಳೂರು, ಜೂನ್ 12: ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್​ಸಿಬಿ ಮಾರ್ಕೆಟಿಂಗ್​ ಮುಖಸ್ಥ​​​​​​​ ನಿಖಿಲ್ ಸೋಸಲೆ, ಸುನೀಲ್ ಮ್ಯಾಥ್ಯೂ, ಕಿರಣ್‌ ಕುಮಾರ್, ಶಮಂತ್ ಮಾವಿನಕೆರೆಗೆ ಹೈಕೋರ್ಟ್​ ಮಧ್ಯಂತರ ಜಾಮೀನು ನೀಡಿದೆ. ಆರೋಪಿಗಳು ಪಾಸ್ ಪೋರ್ಟ್ ವಶಕ್ಕೆ ನೀಡುವಂತೆ ನ್ಯಾ.ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಪೀಠ ಷರತ್ತು ವಿಧಿಸಿ, ಮಧ್ಯಂತರ ಜಾಮೀನು ನೀಡಿದೆ.

ಪ್ರಕರಣದಲ್ಲಿ ತಮ್ಮನ್ನು ಬಂಧಿಸಿದ ಪೊಲೀಸರ ಕ್ರಮ ಕಾನೂನು ಬಾಹಿರವಾಗಿದ್ದು, ಕೂಡಲೆ ಬಿಡುಗಡೆ ಮಾಡಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ನಾಲ್ವರು ಆರ್​ಸಿಬಿ ಸಿಬ್ಬಂದಿ ಸಲ್ಲಿಸಿದ್ದರು. ಆರ್​ಸಿಬಿ ಮಾರ್ಕೆಟಿಂಗ್​ ಹೆಡ್ ನಿಖಿಲ್​ ಸೋಸಲೆ, ಡಿಎನ್​ಎ ಎಂಟರ್​ಟೈನ್​ಮೆಂಟ್​ ನೆಟ್​ವರ್ಕ್​​ಸ್​ನ ನಿರ್ದೇಶಕ ಸುನೀಲ್​ ಮ್ಯಾಥ್ಯೂ, ಡಿಎನ್​ಎ ಮ್ಯಾನೇಜರ್​ ಕಿರಣ್​ ಕುಮಾರ್ ಮತ್ತು ಸಮಂತ್​ ಮಾವಿನಕೆರೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಮಧ್ಯಂತರ ಮನವಿ ಕುರಿತ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಸ್​.ಆರ್​ ಕೃಷ್ಣ ಕುಮಾರ್ ಅವರ ಪೀಠ್​ ಮಧ್ಯಂತರ ಜಾಮೀನು ನೀಡಿದೆ.

ವಾದ-ಪ್ರತಿವಾದ
ವಕೀಲ ಸಂದೇಶ್ ಚೌಟ: ಸಿಸಿಬಿ ಮೂಲಕ ನಿಖಿಲ್ ಸೋಸಲೆಯನ್ನು ಬಂಧಿಸಲಾಗಿದೆ. ಸಿಐಡಿಗೆ ತನಿಖೆ ಹಸ್ತಾಂತರವಾದಾಗ ಸಿಸಿಬಿಗೆ ಬಂಧಿಸುವ ಅಧಿಕಾರವಿರಲಿಲ್ಲ. ಕಾರಣಗಳನ್ನು ತಿಳಿಸದೆ ಕಾನೂನುಬಾಹಿರವಾಗಿ ಬಂಧಿಸಲಾಗಿದೆ. ಮಧ್ಯಾಹ್ನ 2.20ಕ್ಕೆ ಬಂಧನದ ಕಾರಣ ತಲುಪಿಸಲಾಗಿದೆ. ಕಬ್ಬನ್​​ಪಾರ್ಕ್ ಪೊಲೀಸರು ಬಂಧಿಸಿ ಕೋರ್ಟ್​​ಗೆ ಹಾಜರುಪಡಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ: ಬೆಂಗಳೂರು ತೊರೆಯುವಾಗ ಬಂಧಿಸಲಾಗಿದೆ. 11 ಅಮಾಯಕರ ಸಾವಿನ ಬಗ್ಗೆ ಅವರು ವಾದಿಸುತ್ತಿಲ್ಲ ಎಂದು ವಾದ ಮಂಡಿಸಿದರು.

ವಕೀಲ ಸಂದೇಶ್ ಚೌಟ: ಸಿಸಿಬಿ ಪೊಲೀಸರು ಅಕ್ರಮವಾಗಿ ಬಂಧಿಸಿದರು. ನಂತರ ಕಬ್ಬನ್​ಪಾರ್ಕ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.

ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ: ಈ ಎಲ್ಲ ಆರೋಪಗಳು ಅರ್ಜಿಯಲ್ಲಿ ಉಲ್ಲೇಖಿಸಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದರು.

ವಕೀಲ ಸಂದೇಶ್ ಚೌಟ: ಆರೋಪಿಗಳನ್ನು ಬಂಧಿಸುವಂತೆ ಸಿಎಂ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ತನಿಖಾಧಿಕಾರಿಗೆ ಸಿಎಂ ಬಂಧನದ ನಿರ್ದೇಶನ ನೀಡುವಂತಿಲ್ಲ.

ಪೀಠ: ಮುಖ್ಯಮಂತ್ರಿಗೆ ಹೀಗೆ ಹೇಳುವ ಅಧಿಕಾರವಿಲ್ಲವೇ ಎಂದು ಪ್ರಶ್ನಿಸಿತು.

ವಕೀಲ ಸಂದೇಶ್ ಚೌಟ: ಸುಪ್ರೀಂಕೋರ್ಟ್ ಹಲವು ಪ್ರಕರಣಗಳಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದೆ. ಸಿಎಂಗೆ ಈ ರೀತಿ ಬಂಧಿಸಲು ಸೂಚಿಸುವ ಅಧಿಕಾರವಿಲ್ಲ.

ವಕೀಲ ಸಂದೇಶ್ ಚೌಟ: ಆಂಧ್ರಪ್ರದೇಶದಲ್ಲಿ ದೇವಸ್ಥಾನದ ಗೋಡೆ ಕುಸಿದು ಕಾಲ್ತುಳಿತವಾಗಿತ್ತು. ನ್ಯಾಯಾಂಗ ತನಿಖೆ ನಡೆಸಿ ಕಾರಣ ತಿಳಿಯಲಾಗಿತ್ತು. ನಂತರ ತಜ್ಞರ ಸಲಹೆ ಪಡೆದು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಈ ಕೇಸ್ ನಲ್ಲಿ ಘಟನೆಯ ಮರುದಿನ ಪಿಐಎಲ್ ದಾಖಲಾಯಿತು. ಪಿಐಎಲ್ ದಾಖಲಿಸಿಕೊಂಡ ಬಳಿಕ ಪೊಲೀಸರು ಎಫ್ಐಆರ್ ದಾಖಲಿಸಿದರು.

ವಕೀಲ ಸಂದೇಶ್ ಚೌಟ: ಪ್ರಕರಣದ ತನಿಖೆಯ ನಂತರ ಸಾವಿಗೆ ಕಾರಣ ತಿಳಿಯಲಿದೆ. ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಯಿತು. ಸಿಎಂ ಕಾರ್ಯದರ್ಶಿಯನ್ನು ಹುದ್ದೆಯಿಂದ ಕೈಬಿಡಲಾಯಿತು. ಆದರೆ ಅವರನ್ನು ಯಾರೂ ಬಂಧಿಸಿಲ್ಲ.

ಪೀಠ: ಸಿಎಂ ಬಂಧನದ ಸೂಚನೆ ನೀಡಿದ್ದರೇ? ಇವರನ್ನು) ಬಂಧಿಸಲು ಸಿಸಿಬಿಗೆ ಅಧಿಕಾರವಿತ್ತೆ?

ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ: ದೇಶ ತೊರೆಯುತ್ತಿರುವಾಗ ಬಂಧಿಸಲಾಗಿದೆ. ಈ ಬಗ್ಗೆ ಮಾಹಿತಿ ಪಡೆದು ಲಿಖಿತ ಉತ್ತರ ನೀಡುತ್ತೇನೆ. ಹೀಗಾಗಿ ಮಧ್ಯಂತರ ಜಾಮೀನು ನೀಡದಂತೆ ಮನವಿ ಮಾಡಿದರು.

ಆರ್​​ಸಿಬಿ ಪರ ಹಿರಿಯ ವಕೀಲ ಸಿ.ವಿ.ನಾಗೇಶ್: ಸಿಎಂ, ಡಿಸಿಎಂ ಕೂಡಾ ಆರ್​​ಸಿಬಿ ಅಭಿಮಾನಿಗಳನ್ನು ಆಹ್ವಾನಿಸಿದ್ದಾರೆ. ಗಾಯಗೊಳಿಸುವುದು, ಕೊಲೆಯ ಉದ್ದೇಶವಿಲ್ಲದೇ ವ್ಯಕ್ತಿಯ ಸಾವಿಗೆ ಕಾರಣನಾಗುವುದು ಈ ಯಾವುದೇ ಸೆಕ್ಷನ್​ಗಳು ಅನ್ವಯವಾಗುವುದಿಲ್ಲವೆಂದು ವಾದ ಮಂಡಿಸಿದರು.


Share It

You cannot copy content of this page