ರಾಜಕೀಯ ಸುದ್ದಿ

ಸೆ.21 ರಂದು ದೆಹಲಿ ನೂತನ ಸಿಎಂ ಅತಿಶಿ ಪ್ರಮಾಣವಚನ ಸ್ವೀಕಾರ

Share It

ನವದೆಹಲಿ: ಆಮ್ ಆದ್ಮಿ ಪಕ್ಷದಿಂದ ದೆಹಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಮಾರ್ಲೆನಾ ಅವರು ಇದೇ ಸೆಪ್ಟೆಂಬರ್ 21ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಮೂಲಗಳ ಪ್ರಕಾರ, ಹೊಸ ಸರ್ಕಾರ ರಚನೆಗಾಗಿ ಅತಿಶಿ ಅವರು ದೆಹಲಿ ರಾಜ್ಯದ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಅವರಿಗೆ ಬರೆದ ಪತ್ರದಲ್ಲಿ ಪ್ರಮಾಣವಚನ ಸಮಾರಂಭಕ್ಕೆ ಯಾವುದೇ ಆದ್ಯತೆಯ ದಿನಾಂಕವನ್ನು ನಮೂದಿಸಿಲ್ಲ. ತನ್ನ ಕ್ಯಾಬಿನೆಟ್ ಸಚಿವರ ಹೆಸರನ್ನು ನಂತರ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ. ಹೀಗಾಗಿ, ಸೆಪ್ಟಂಬರ್ 21 ರಂದು ಅತಿಶಿ ಮಾರ್ಲೆನಾ ಅವರೊಬ್ಬರೇ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಹೆಚ್ಚಾಗಿದೆ.

ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರು ಅರವಿಂದ್ ಕೇಜ್ರಿವಾಲ್ ಅವರ ರಾಜೀನಾಮೆಯ ನಂತರ ನಿಯೋಜಿತ ಮುಖ್ಯಮಂತ್ರಿ ಅತಿಶಿ ಮಾರ್ಲೆನಾ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸೆಪ್ಟೆಂಬರ್ 21ರಂದು ದಿನಾಂಕವನ್ನು ಪ್ರಸ್ತಾಪಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಎಎಪಿ ಶಾಸಕಾಂಗ ಪಕ್ಷದ ನಾಯಕಿಯಾಗಿ ಅವಿರೋಧವಾಗಿ ಆಯ್ಕೆಯಾದ ಅತಿಶಿ ಮಾರ್ಲೆನಾ ಅವರು ದೆಹಲಿಯ 3ನೇ ಮಹಿಳಾ ಮುಖ್ಯಮಂತ್ರಿಯಾಗಲಿದ್ದಾರೆ. ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಕಾರ್ಯತಂತ್ರದಂತೆ ಸಿಎಂ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್ ಅವರು ರಾಜೀನಾಮೆ ನೀಡಿದ ನಂತರ ಅತಿಶಿ ಮಾರ್ಲೆನಾ ಅವರು ನಾಯಕತ್ವವನ್ನು ವಹಿಸಿಕೊಂಡರು.

ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರ ಆಪ್ತ ಮಿತ್ರರಾದ ಅತಿಶಿ ಮಾರ್ಲೆನಾ ಅವರು ಅರವಿಂದ್ ಕೇಜ್ರಿವಾಲ್ ಅವರನ್ನು ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯ ನಂತರ ಮತ್ತೆ ಸಿಎಂ ಆಗಿ ತರಲು ಪಣ ತೊಟ್ಟಿದ್ದಾರೆ.

ಇದೇ ಸೆಪ್ಟೆಂಬರ್ 26ರಿಂದ 27ರವರೆಗೆ ಅಧಿವೇಶನ ನಡೆಯಲಿದ್ದು, ದೆಹಲಿ ಅಸೆಂಬ್ಲಿಯಲ್ಲಿ ನಿಯೋಜಿತ ಮುಖ್ಯಮಂತ್ರಿ ಅತಿಶಿ ಮಾರ್ಲೆನಾ ಅವರು ತಮ್ಮ ಸರ್ಕಾರದ ಬಹುಮತವನ್ನು ಸಾಬೀತು ಪಡಿಸಬೇಕಾಗಿದೆ.


Share It

You cannot copy content of this page