ಬೆಂಗಳೂರು: ಬಿಜೆಪಿ ನಾಯಕರ ಅಸಂಸ್ಕೃತಿ ಮತ್ತು ಅನಾಚಾರದ ಹೇಳಿಕೆಗಳಿಗೆ ರವಿಕುಮಾರ್ ಹೇಳಿಕೆ ಮತ್ತೊಂದು ಸೇರ್ಪಡೆಯಷ್ಟೇ. ಇದೊಂದು ನಾಚಿಕೆಗೇಡಿನ ವರ್ತನೆ, ಕೊಳಕು ಭಾಷಾ ಬಳಕೆಯ ಪುನರಾವರ್ತನೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ.
ವಿಧಾನಪರಿಷತ್ ಸದಸ್ಯ ರವಿಕುಮಾರ್ ಕಲಬುರಗಿ ಜಿಲ್ಲಾಧಿಕಾರಿಗಳ ಕುರಿತು ಕೆಲವು ತಿಂಗಳ ಹಿಂದೆ ಅವಹೇಳನಕಾರಿಯಾಗಿ ಮಾತನಾಡಿ, ನ್ಯಾಯಾಲಯ ಛೀಮಾರಿ ಹಾಕಿದ ನಂತರ ಬೇಷರತ್ ಕ್ಷಮೆ ಕೇಳಿದ್ದರು. ಮತ್ತೊಂದು ಪ್ರಕರಣದಲ್ಲಿ ಸಿ.ಟಿ.ರವಿ ಅವರು ಸದನದಲ್ಲಿ ಮಹಿಳಾ ಮಂತ್ರಿಯ ಕುರಿತು ಆಡಿದ ಮಾತು ಅಸಹನೀಯ, ಸಂವೇದನಾರಹಿತ, ಸಮಾಜಕ್ಕೆ ಆಘಾತಕಾರಿಯಾದ ನಡವಳಿಕೆಯಾಗಿತ್ತು ಎಂದು ನೆನಪಿಸಿದ್ದಾರೆ.
ಈಗ ಮತ್ತೊಮ್ಮೆ ರವಿಕುಮಾರ್ ಅವರ ಬಾಯಿಂದ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ಕುರಿತ ಹೇಳಿಕೆ ಬಂದಿದೆ. ಸರ್ಕಾರವನ್ನು ನಡೆಸಲು ಶ್ರಮಿಸುವ ಮಹಿಳಾ ಅಧಿಕಾರಿ ಅದರಲ್ಲೂ ಅತ್ಯುನ್ನತ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುವವರ ಬಗ್ಗೆ ಮಾತನಾಡುವಾಗ ಕನಿಷ್ಠ ಸೌಜನ್ಯ ತೋರದೆ, ತಮ್ಮ ಮನೆ ಹೆಣ್ಣುಮಕ್ಕಳಿಗಾದರೆ ಈ ರೀತಿ ಭಾಷೆ ಬಳಸುತ್ತೇವೆಯೇ ಎಂದು ಯೋಚಿಸುವ ಔದಾರ್ಯವೂ ಇಲ್ಲದ ಕೊಳಕು ಮನಸ್ಸಿನ ಮನುಷ್ಯ ಇವರು ಎಂದು ಗುಡುಗಿದ್ದಾರೆ.
ಹುಟ್ಟು ಗುಣ ಸುಟ್ಟರು ಹೋಗಲ್ಲ ಎಂಬ ಗಾದೆ ಬಿಜೆಪಿ ನಾಯಕರಿಗೆ ಅನ್ವರ್ಥ ಅನ್ನಿಸುತ್ತದೆ. ಬಿಜೆಪಿ, ಆರ್ ಎಸ್ ಎಸ್, ವಿಶ್ವ ಹಿಂದೂ ಪರಿಷತ್ ನವರು ಅವರ ಪಕ್ಷದ ಪದಾಧಿಕಾರಿಗಳಿಗೆ/ ನಾಯಕರಿಗೆ ನಾಲಿಗೆ ಬಿಗಿ ಹಿಡಿದು ಮಾತನಾಡುವುದಕ್ಮೆ ತರಬೇತಿ ನೀಡಲು ಮರೆತಿರಬೇಕು. ಅದರಲ್ಲೂ ಮಹಿಳೆಯರ ಕುರಿತು ಮಾತನಾಡುವಾಗ ಸೌಜನ್ಯ, ಸಂಸ್ಕೃತಿ, ಆಚಾರ ವಿಚಾರ ಯಾವುದೂ ಇಲ್ಲದೆ ಅನಾಗರೀಕ, ಅಪಾರ್ಥ ಕಲ್ಪಿಸುವ ಭಾಷೆ ಬಳಸುವುದನ್ನು ಕಲಿಸಿರಬೇಕು ಎಂದು ಟೀಕಿಸಿದ್ದಾರೆ.
ಮಾತು ಮಾತಿಗೆ ಭಾರತ ಮಾತೆಗೆ ಜೈಕಾರ ಹಾಕುವ ಇವರು ಬೂಟಾಟಿಕೆಯವರು, ನಮ್ಮೊಡನೆ ಇರುವ ಹೆಣ್ಣುಮಕ್ಕಳನ್ನು ಗೌರವಿಸುವುದೇ ಭಾರತ ಮಾತೆಗೆ ನಾವು ಸಲ್ಲಿಸುವ ನಿಜವಾದ ಗೌರವ. ಆದರೆ ಇದನ್ನು ಬಿಜೆಪಿ ಅವರಿಂದ ನಿರೀಕ್ಷಿಸಬೇಡಿ, ನಾವು ಭಾಷಣಕ್ಕೆ ಮಾತ್ರ ಸೀಮಿತ ಎಂಬುದನ್ನು ಜಗತ್ತಿಗೆ ಸಾರಲು ಹೊರಟಿರುವ ಇಂತಹ ಮನಸ್ಥಿತಿಯ ನಾಯಕರಿಗೆ ನನ್ನ ಧಿಕ್ಕಾರ ಎಂದು ತಿಳಿಸಿದ್ದಾರೆ.