ರಾಜಕೀಯ ಸುದ್ದಿ

ನಮ್ಮ ಮೆಟ್ರೋ ಮನಮೋಹನ್ ಸಿಂಗ್ ಕೊಡುಗೆ : ಬಿಜೆಪಿ ಅದನ್ನು ತಮ್ಮ ಸಾಧನೆ ಎಂದುಕೊಳ್ಳುತ್ತಿದೆ: ಬಿಜೆಪಿ ನಾಯಕರಿಗೆ ಸಚಿವ ರಾಮಲಿಂಗಾ ರೆಡ್ಡಿ ಟಾಂಗ್

Share It

ಬೆಂಗಳೂರು: ಬಿಜೆಪಿಯ ವಿಧಾನಸಭಾ ಮತ್ತು ಲೋಕಸಭಾ ಸದಸ್ಯರಿಗೆ, ಪ್ರಮುಖ‌ ಮುಖಂಡರಿಗೆ ಎಲ್ಲಾ ಸತ್ಯಗಳು ತಿಳಿದಿದ್ದರೂ ಸಹ ಅದನ್ನು ಲೆಕ್ಕಿಸದೇ, ಸ್ವಲ್ಪವೂ ನಾಚಿಕೆಯಿಲ್ಲದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನಮ್ಮಮೆಟ್ರೋ ಶ್ರೇಯಸ್ಸು ಕೊಡುತ್ತಿದ್ದಾರೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಕಿಡಿಕಾರಿದ್ದಾರೆ.

2006ರಲ್ಲಿ ಮನಮೋಹನ್ ಸಿಂಗ್ ರವರು ಪ್ರಧಾನ ಮಂತ್ರಿಗಳಾಗಿದ್ದಾಗ, ರಾಜ್ಯದಲ್ಲಿ ಧರ್ಮಸಿಂಗ್ ಮುಖ್ಯಮಂತ್ರಿಗಳಾಗಿದ್ದಾಗ, ನಾನು ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದಾಗ ಎಂ.ಜಿ‌‌ ರಸ್ತೆಯಲ್ಲಿ ನಮ್ಮ ಮೆಟ್ರೋಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.

ನಮ್ಮ ಮೆಟ್ರೋ ಜನರದ್ದು–ಯಾವ ಪಕ್ಷದ ಸ್ವತ್ತು ಅಲ್ಲ! ಎಂಬುದು ನಮ್ಮ ಭಾವನೆಯಾಗಿತ್ತು. ಆದರೆ ಬಿಜೆಪಿ‌ ಅವರಿಗೆ ಜನಾಸಕ್ತಿಗಿಂತ, ಪ್ರಚಾರಸಕ್ತಿ ಹೆಚ್ಚು. ಹೀಗಾಗಿ, ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ. 

ಕರ್ನಾಟಕ ಸರ್ಕಾರ ಸರಳ ಪಾಲುದಾರ ಅಲ್ಲ, ಅನೇಕ ಸಂದರ್ಭಗಳಲ್ಲಿ ಅದು ಹೆಚ್ಚಿನ ಹಣವನ್ನು ಖರ್ಚು ಮಾಡುತ್ತದೆ, ವಿಶೇಷವಾಗಿ ಜಮೀನು ಖರೀದಿ, ವೆಚ್ಚ ಮಿತಿಗೆ ಮೇಲ್ಪಟ್ಟ ಭಾಗಗಳು ಮತ್ತು  ಪ್ರಮುಖ ಯೋಜನಾ ಅಂಶಗಳಿಗಾಗಿ ಕರ್ನಾಟಕ ಸರ್ಕಾರವು ಖರ್ಚು ಮಾಡುತ್ತಿದೆ. ಅರ್ಧ ಸತ್ಯಗಳನ್ನು ಹರಡುವುದನ್ನು ನಿಲ್ಲಿಸಿ, ಕರ್ನಾಟಕ ಸರ್ಕಾರಕ್ಕೆ ಅದರ ನಿಜವಾದ ಗೌರವ ನೀಡಿ ಎಂದು ಹೇಳಿದ್ದಾರೆ.

ನಿಜವಾದ ಮಾಹಿತಿ ಇಲ್ಲಿದೆ ಎಂದಿರುವ ಅವರು, ಫೇಸ್ 1: ಕರ್ನಾಟಕ ಸರ್ಕಾರ – 30% (ಜಮೀನೂ ಸೇರಿ), ಕೇಂದ್ರ – 25%, ಉಳಿದ 45% ಸಾಲದ ರೂಪದಲ್ಲಿ. ಫೇಸ್ 2ರಲ್ಲಿ ಕರ್ನಾಟಕ – 30% + ಜಮೀನು ಮತ್ತು ಮಿತಿಮೀರಿದ ವೆಚ್ಚದ ಬಹುತೇಕ ಭಾಗ, ಕೇಂದ್ರ – 20%, ಉಳಿದ 50% ಸಾಲ. ಫೇಸ್ 3 ರಲ್ಲಿ ಕರ್ನಾಟಕ – 20% + ಸಂಪೂರ್ಣ ಜಮೀನು ಮತ್ತು ಪುನರ್ವಸತಿ ವೆಚ್ಚ, ಕೇಂದ್ರ – 20%, ಉಳಿದ 60% ಸಾಲ ಎಂದು ತಿಳಿಸಿದ್ದಾರೆ.

ಪ್ರತಿ ಹಂತದಲ್ಲೂ ಕರ್ನಾಟಕ ಸರ್ಕಾರ ಜಮೀನಿಗಾಗಿ ದೊಡ್ಡ ಮೊತ್ತ ಹಾಕುತ್ತದೆ, ಮತ್ತು ಯೋಜನೆಗಳನ್ನು ಮುನ್ನಡೆಸಲು ನಿರಂತರವಾಗಿ ಹಣ ನೀಡುತ್ತದೆ — ಅನೇಕ ಬಾರಿ ಕೇಂದ್ರದಷ್ಟು ಅಥವಾ ಅದಕ್ಕಿಂತ ಹೆಚ್ಚು. ನಿಜ ಹೇಳುವುದಾದರೆ, ಎಷ್ಟು ಕಾಲ ಬಿಜೆಪಿ‌‌ ನಾಯಕರು ತಮ್ಮದೇ ರಾಜ್ಯವನ್ನು ಇಂಥ ನಿರ್ಲಕ್ಷ್ಯದಿಂದ ಅವಮಾನಿಸುತ್ತಾ, ನಮ್ಮ ಮೆಟ್ರೋ ಕೇಂದ್ರದ ಉಡುಗೊರೆ ಎಂದು ನಟಿಸುತ್ತಾರೆ? ನಂಬಿಸುತ್ತಾರೆ? ಎಂದು ವ್ಯಂಗ್ಯವಾಡಿದ್ದಾರೆ.


Share It

You cannot copy content of this page