ಸುದ್ದಿ

ಬೆಳೆ ಪರಿಹಾರ ಹಾಗೂ ಪ್ರಧಾನಮಂತ್ರಿ ಫಸಲ ಬೀಮಾ ಬೆಳೆ ಪರಿಹಾರ ನೀಡುವಂತೆ ರೈತರ ನಿಯೋಗದ ಮನವಿ

Share It

ರೈತರ ಹೊರಾಟದಲ್ಲಿ ರೈತರ ಮೇಲಿರುವ ಮೊಕದ್ದಮೆಗಳನ್ನು ವಾಪಸ ಪಡೆಯಲು ಭರವಸೆ ;
ಮಹದಾಯಿ, ಕಳಸಾ-ಬಂಡೂರಾ ಯೋಜನೆ ಜಾರಿಗೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕ ತಕ್ಷಣ ಕಾಮಗಾರಿ ಪ್ರಾರಂಭಿಸಲು ನಿರ್ಧಾರ

ಬೆಂಗಳೂರು : ಮಹಾದಾಯಿ ಕಳಸಾ-ಬಂಡೂರಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ವನ್ಯಜೀವಿ ಮಂಡಳಿ ಅನುಮತಿ ನೀಡಿದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವದು ಎಂದು ಮಹದಾಯಿ ರೈತ ಹೋರಾಟಗಾರರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭರವಸೆ ನೀಡಿದರು.

ಅವರು ವಿಧಾನಸೌಧದಲ್ಲಿ ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಅವರ ನೇತೃತ್ವದಲ್ಲಿ ಮಹದಾಯಿ, ಕಳಸಾ-ಬಂಡೂರಿ ರೈತ ಹೋರಾಟಗಾರರ ನಿಯೋಗದೊಂದಿಗೆ ಮಾತನಾಡಿದ ಅವರು ಮಹಾದಾಯಿ ನ್ಯಾಯಾಧೀಕರಣ ಐ-ತೀರ್ಪಿನಲ್ಲಿ ಕರ್ನಾಟಕ ರಾಜ್ಯಕ್ಕೆ 13.42 ಟಿಎಂಸಿ ನೀರನ್ನು ಉಪಯೋಗಿಸಲು ಆದೇಶ ನೀಡಿದ ನಂತರ ಸುಪ್ರೀಂಕೋರ್ಟ್ ನಿರ್ದೇಶನದ ಮೆರೆಗೆ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದೆ.

ಈ ಯೋಜನೆಗೆ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಅರಣ್ಯ ಪ್ರದೇಶವನ್ನು ಬಳಸಿಕೊಳ್ಳಲು ರಾಜ್ಯ ವನ್ಯಜೀವಿ ಮಂಡಳಿ ಅನುಮೋದನೆ ನೀಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಕೇಂದ್ರ ಸರ್ಕಾರದ ಅರಣ್ಯ ಹಾಗೂ ಪರಿಸರ ಇಲಾಖೆಯು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ರಾಜ್ಯ ಸರ್ಕಾರ ಸಲ್ಲಿಸಿದ ಪ್ರಸ್ತಾವನೆಗೆ ಅನುಮೋದನೆಯನ್ನು ಇಲ್ಲಿಯವರೆಗೂ ನೀಡಲಿಲ್ಲ. ಇದಲ್ಲದೇ ರಾಜ್ಯದಿಂದ ಪ್ರಸ್ತಾವನೆಯೇ ಇಲ್ಲದೇ ಧಾರವಾಡದ ನರೇಂದ್ರ ಮೂಲಕ ಹೋಗುವ ಗೋವಾ-ತಮ್ನಾರ 400 ಕೆ.ವಿ. ಸಾಮರ್ಥ್ಯದ ವಿದ್ಯುತ್‌ ಯೋಜನೆಗೆ ನಮ್ಮ ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿ ಸಹಮತಿಸಿದ ಯೋಜನೆಗೆ ಬೇಕಾಗುವ ವನ್ಯಜೀವಿ ಮಂಡಳಿಯಿಂದ ಅನುಮತಿ ಸಿಗುವವರೆಗೆ ಗೋವಾ-ತಮ್ನಾರ ವಿದ್ಯುತ್‌ ಯೋಜನೆಯನ್ನು ತಡೆಹಿಡಿದು ಮರು ಪರಿಶೀಲಿಸಬೇಕೆಂದು ರೈತರು ಒತ್ತಾಯಿಸಿದರು.

ಉತ್ತರ ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವೆಂದರೆ ಮಹಾದಾಯಿ ನೀರನ್ನು ಮಲಪ್ರಭಾ ನದಿಗೆ ಸೇರಿಸಿದರೆ 4 ಜಿಲ್ಲೆ, 14 ತಾಲ್ಲೂಕಿನ ನಗರ ಹಾಗೂ ಗ್ರಾಮಗಳಿಗೆ ಕುಡಿಯುವ ನೀರಿಗೆ ಪರಿಹಾರ ಎಂದರೆ ಈ ಯೋಜನೆ. ರಾಜ್ಯ ಸರ್ಕಾರದ ವತಿಯಿಂದ ತಾವು ಈಗಾಗಲೇ ಕಾಮಗಾರಿ ಪ್ರಾರಂಭಿಸಲು ಟೆಂಡರ್‌ ಕರೆದು ಗುತ್ತಿಗೆಧಾರರಿಗೆ ಕಾರ್ಯಾದೇಶ ನೀಡಿದ್ದೀರಿ. ವನ್ಯಜೀವಿ ಮಂಡಳಿಯ ಅನುಮತಿ ಅವಶ್ಯವಿದ್ದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ದೆಹಲಿಯಲ್ಲಿ ಸಂಸದರ ಸಭೆ ಕರೆಯುವುದಾಗಿ ಹೆಳಿದರು. ಈ ವಿಷಯವಾಗಿ ಈಗಾಗಲೇ ಕೇಂದ್ರ ಸಚಿವರುಗಳ ಜೊತೆ ಮಾತನಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.

ರೈತರಮೇಲಿನ ಮೊಕದ್ದಮೆ ವಾಪಾಸ ಪಡೆಯುತ್ತೇವೆ :ಇದೇ ಸಂದರ್ಭದಲ್ಲಿ ರೈತರ ಮನವಿಗೆ ಸ್ಪಂದಿಸಿ ಮಹದಾಯಿ, ಕಳಸಾ ಬಂಡೂರಿ ಹಾಗೂ ರೈತರ ಮೇಲಿನ ಎಲ್ಲ ಮೊಕದ್ದಮೆಗನ್ನು ಹಿಂಪಡೆಯಲು ಗೃಹ ಸಚಿವರಾದ ಜಿ. ಪರಮೇಶ್ವರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ನವಲಗುಂದ ವಿಧಾನಸಭಾ ಕ್ಷೇತ್ರದ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲ್ಲೂಕಿನ ಮಲಪ್ರಭಾ ಬಲದಂಡೆ ಕಾಲುವೆ ಆಧೂನೀಕರಣ ಬಾಕಿ ಇರುವ ಕಾಮಗಾರಿ ERM-III ಪ್ರಾರಂಭಿಸಿ ಕೊನೇಯ ಅಂಚಿನ ರೈತರ ಜಮೀನುಗಳಿಗೆ ನೀರು ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.

ಈ ವರ್ಷ ಮುಂಗಾರು ಮಳೆ ಹೆಚ್ಚಾಗಿದ್ದರಿಂದ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳು, ಗ್ರಾಮೀಣಾಭಿವೃದ್ಧಿ ಇಲಾಖೆಯ ರಸ್ತೆಗಳು ನಗರ ಹಾಗೂ ಗ್ರಾಮಗಳಲ್ಲಿ ಸಂಚರಿಸಲಿಕ್ಕೆ ತೊಂದರೆಯಾಗುತ್ತಿದ್ದು ರೈತರು ಬೆಳೆದ ಮುಂಗಾರು ಬೆಳೆ ಹಾಳಾಗಿದ್ದು ಬೆಳೆ ಪರಿಹಾರ ಹಾಗೂ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ ಬೀಮಾ ಯೋಜನೆಯಿಂದ ಸರಿಯಾಗಿ ರೈತರಿಗೆ ಪರಿಹಾರ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ರೈತರ ಪರವಾಗಿ ನವಲಗುಂದ ವಿದಾನಭಾಕ್ಷೇತ್ರದ ಶಾಸಕ ಎನ್.ಹೆಚ್. ಕೋನರಡ್ಡಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಹದಾಯಿ ರೈತ ಹೋರಾಟಾರರಾದ ಲೋಕನಾಥ ಹೆಬಸೂರ (ನವಲಗುಂದ), ಸಿದ್ದು ತೇಜಿ (ಹುಬ್ಬಳ್ಳಿ), ವಿರೇಶ ಸೊಬರದಮಠ (ನರಗುಂದ), ರಘುನಾಥ ನಡುವಿನಮನಿ, ಫಕ್ಕೀರಗೌಡ ವೆಂಕನಗೌಡ್ರ, ರವಿ ಕಂಬಳಿ, ಗೌಡಪ್ಪಗೌಡ ದೊಡ್ಡಮನಿ, ಬಸಣ್ಣ ಓಲೇಕಾರ, ತಿಪ್ಪಣ್ಣ ಸಾಲಿ, ನಾಗೇಶ ತುಳಸಿಗೆರಿ, ಶಿವಾನಂದ ಮಠಪತಿ, ಸಿದ್ದಪ್ಪ ಪೂಜಾರ, ವೀರಣ್ಣ ಹಿರೇಮಠ, ಶಿವಾನಂದ ಚಿಕ್ಕನರಗುಂದ, ದೇವಪ್ಪ ಗುಡಿಸಾಗರ, ಬಾಷೇಸಾಬ ಅನ್ಸಾರಿ, ರವಿ ವಡ್ಡರ, ಮಂಜುನಾಥ ಸಂಗಣ್ಣವರ, ನಿಂಗಪ್ಪ ಬಡಿಗೇರ ಮುಂತಾದವರು ಉಪಸ್ಥಿತರಿದ್ದರು.


Share It

You cannot copy content of this page