ಬೆಂಗಳೂರು: ಜಾತಿನಿಂದನೆ ಪ್ರಕರಣದಲ್ಲಿ ಈಗಾಗಲೇ ಜೈಲುಪಾಲಾಗಿರುವ ರಾಜರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಶಾಸಕ ಮುನಿರತ್ನ ಸೇರಿದಂತೆ ಏಳು ಜನರ ವಿರುದ್ಧ ಮಹಿಳೆ ದೂರು ನೀಡಿದ್ದು, ಡಿವೈಎಸ್ ಪಿ ದಿನಕರ್ ಶೆಟ್ಟಿ ಮುಂದೆ ಸಂತ್ರಸ್ತ ಮಹಿಳೆಯ ಹೇಳಿಕೆ ದಾಖಲು ಮಾಡಲಾಗಿದೆ. ಇದೀಗ ಪ್ರಕರಣದಲ್ಲಿ ಮುನಿರತ್ನ ಸೇರಿ ಏಳು ಜನರಿಗೆ ಸಂಕಷ್ಟ ಎದುರಾಗಿದೆ.
ಮುನಿರತ್ನ ಈಗಾಗಲೇ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಇನ್ನುಳಿದ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಲು ಈಗಾಗಲೇ ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಮಹಿಳೆಯನ್ನು ಬಲವಂತವಾಗಿ ಕೂಡಿಟ್ಟು, ನಗರದ ಹೊರವಲಯದ ರೆಸಾರ್ಟ್ ನಲ್ಲಿ ನಿರಂತರವಾಗಿ ಅತ್ಯಾಚಾರ ನಡೆಸಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ಮುನಿರತ್ನ ಬಲವಂತವಾಗಿ ತನ್ನನ್ನು ಕೂಡಿಹಾಕಿದ್ದಲ್ಲದೆ, ಅತ್ಯಾಚಾರ ನಡೆಸಿದ ಕುರಿತು ಮಹಿಳೆ ಹೇಳಿಕೆ ನೀಡಿದ್ದು, ಇದು ಮುನಿರತ್ನಗೆ ಉರುಳಾಗಲಿದೆ.
ಜಾತಿನಿಂದನೆ ಪ್ರಕರಣದಲ್ಲಿ ಪೊಲೀಸರು ಮುನಿರತ್ನ ಅವರನ್ನು ಬಂಧಿಸಿ ಎರಡು ದಿನ ಕಸ್ಟಡಿಗೆ ಪಡೆದಿದ್ದರು. ಇದೀಗ ನ್ಯಾಯಾಲಯ14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಈ ನಡುವೆ ಮುನಿರತ್ನ ಜಾಮೀನು ಅರ್ಜಿಯ ತೀರ್ಪು ಇಂದು ಪ್ರಕಟವಾಗಬೇಕಿದೆ.