ಸುದ್ದಿ

ಭೀಮ್ ಆರ್ಮಿ ವತಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರತಿಭಟನೆ

Share It

ಹಾಸನ: ದಲಿತ ಮಹಿಳೆಯರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ್ದ ಹೇಳಿಕೆಯನ್ನು ಖಂಡಿಸಿ, ಹಾಸನ ಜಿಲ್ಲಾ ಭೀಮ್ ಆರ್ಮಿ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಯತ್ನಾಳ್ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಯಿತು‌.

ಹಾಸನದ ಹೇಮಾವತಿ ಪ್ರತಿಮೆ ಬಳಿಯಿಂದ ಬೃಹತ್ ಮೆರವಣಿಗೆಯಲ್ಲಿ ಆಗಮಿಸಿದ ಭೀಮ್ ಆರ್ಮಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿವರೆಗೆ ಬಂದು ಎಡಿಸಿ ಮಂಜುನಾಥ್ ಮೂಲಕ ಸರಕಾರಕ್ಕೆ ಮನವಿ ಮಾಡಿಕೊಂಡರು.

ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಪ್ರಸನ್ನ ಅವರು, ಯತ್ನಾಳ್ ಮುಸ್ಲಿಂ ಮತ್ತು ದಲಿತ ಮಹಿಳೆಯರಿಗೆ ಅವಮಾನವಾಗುವಂತೆ ಹೇಳಿಕೆ ನೀಡುವ ಮೂಲಕ ತನ್ನ ಮನುವಾದಿ ಮನಸ್ಥಿತಿ ಹೊರಹಾಕಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು ಅವರನ್ನು ಗಡಿಪಾರು ಮಾಡಬೇಕು. ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಚನ್ನರಾಯಪಟ್ಟಣ ತಾಲ್ಲೂಕು ಭೀಮ್ ಆರ್ಮಿ ಅಧ್ಯಕ್ಷ ಮಂಜುನಾಥ್ ಹಿರೀಬೀಳ್ತಿ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬೂಕರ್ ಪ್ರಶಸ್ತಿ ಪಡೆದ ನಮ್ಮ ಜಿಲ್ಲೆಯವರೇ ಆದ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆ ಮಾಡಲು ಆಯ್ಕೆ ಮಾಡಿದೆ. ಆದರೆ, ಇದನ್ನು ಮನುವಾದಿ ಮನಸ್ಥಿತಿಗಳು ಸಹಿಸುತ್ತಿಲ್ಲ ಎಂದರು.

ಪ್ರತಾಪ್ ಸಿಂಹ ನ್ಯಾಯಾಲಯದ ಮುಂದೆ ಛೀಮಾರಿ ಹಾಕಿಸಿಕೊಂಡರೆ, ಸಿ.ಟಿ.ರವಿ, ಯತ್ನಾಳ್ ತಮ್ಮ ನಾಲಗೆ ಹರಿಬಿಡುವ ಮೂಲಕ ಮನುವಾದಿ ಮನಸ್ಥಿತಿ ಹೊರಹಾಕಿದ್ದಾರೆ. ಇಂತಹ ನಾಲಾಯಕ್ ನಾಯಕರ ವಿರುದ್ಧ ಸರ್ವಜನಾಂಗದ ಶಾಂತಿಯ ತೋಟದಲ್ಲಿ ಅಶಾಂತಿ ಸೃಷ್ಡಿಸುವ ಆರೋಪದಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಂ  ಸಿದ್ದರಾಮಯ್ಯ ಹಾಗೂ ಗೃಹಸಚಿವರಾದ ಡಾ. ಪರಮೇಶ್ವರ್ ಅವರನ್ನು ಆಗ್ರಹಿಸುತ್ತೇವೆ ಎಂದರು.

ಪ್ರತಿಭಟನೆಯಲ್ಲಿ ಭೀಮ್ ಆರ್ಮಿ ಸಂಘಟನೆಯ ಮುಜೀರ್ ಪಾಷಾ, ಗಣೇಶ ಶೆಟ್ಟಿಗೌಡನಹಳ್ಳಿ, ಬೂಕ ಗೋವಿಂದರಾಜು, ಮನು, ಪ್ರದೀಪ್ ಸಾಗತವಳ್ಳಿ, ಪರ್ವೀಜ್ ಪಾಷಾ, ದೊರೆರಾಜು, ರವಿ ಕುಂಬಾರಹಳ್ಳಿ, ಪಾಪು ಪ್ರಕಾಶ್ ಮುಂತಾದವರು ಪಾಲ್ಗೊಂಡಿದ್ದರು.


Share It

You cannot copy content of this page