ಕರೂರು: ತಮಿಳಿಗ ವಿಟ್ರಿ ಕಳಗಂ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ಅವರ ರ‍್ಯಾಲಿಯಲ್ಲಿ ನಡೆದ ಕಾಲ್ತುಳಿತ 39 ಮಂದಿ ಸಾವನ್ನಪ್ಪಿದ್ದಾರೆ.
ಶನಿವಾರ ಕರೂರಿನಲ್ಲಿ ದಳಪತಿ ವಿಜಯ್ ಅವರು ರಾಯಕೀಯ ರ‍್ಯಾಲಿ ಹಮ್ಮಿಕೊಂಡಿದ್ದರು. ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ವೇಳೆ ಉಂಟಾದ ಕಾಲ್ತುಳಿತದಿಂದ ಈ ದುರಂತ ಸಂಭವಿಸಿದೆ. ದಳಪತಿ ವಿಜಯ್ ಅವರಿಗೆ ಅಪಾರ ಜನಪ್ರಿಯತೆ ಇದೆ. ಅವರು ಎಲ್ಲಿಯೇ ಹೋದರೂ ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಾರೆ.
ರಾಜಕೀಯಕ್ಕೆ ಎಂಟ್ರಿ ನೀಡಿರುವ ವಿಜಯ್ ಅವರು ತಮಿಳಿಗ ವಿಟ್ರಿ ಕಳಗಂ ಪಕ್ಷದ ಪ್ರಚಾರಕ್ಕೆ ಹೆಚ್ಚು ಗಮನ ನೀಡಿದ್ದಾರೆ. ಕರೂರು ಜಿಲ್ಲೆಯಲ್ಲಿ ಅವರು ದೊಡ್ಡ ರ‍್ಯಾಲಿ ನಡೆಸಿದರು. ಜನರನ್ನು ನಿಯಂತ್ರಿಸಲು ಸಾಧ್ಯವಾಗದೇ ಪರಿಸ್ಥಿತಿ ಕೈ ಮೀರಿತು. ಕರೂರು ಕಾಲ್ತುಳಿದಲ್ಲಿ 6 ಮಕ್ಕಳು ಸೇರಿ ಈವರೆಗೂ ಒಟ್ಟು 39 ಜನರು ಮೃತರಾಗಿದ್ದಾರೆ. 40ಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ರ‍್ಯಾಲಿಯಲ್ಲಿ ಅಂದಾಜು 90 ಸಾವಿರ ಜನರು ಸೇರಿದ್ದರು ಎನ್ನಲಾಗಿದೆ. ದಳಪತಿ ವಿಜಯ್ ಅವರನ್ನು ಹತ್ತಿರದಿಂದ ನೋಡಬೇಕು ಎಂಬ ಕಾರಣಕ್ಕೆ ಎಲ್ಲರೂ ನುಗ್ಗಿದ್ದರಿಂದ ಕಾಲ್ತುಳಿತ ಉಂಟಾಯಿತು. ಈ ಕಾಲ್ತುಳಿತ ಸುದ್ದಿ ತಿಳಿದ ಕೂಡಲೇ ಅನೇಕ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.
ನರೇಂದ್ರ ಮೋದಿ, ರಾಜನಾಥ್ ಸಿಂಗ್, ಅಮಿತ್ ಶಾ, ಅರವಿಂದ್ ಕೇಜ್ರಿವಾಲ್, ಎಂ.ಕೆ. ಸ್ಟಾಲಿನ್ ಮುಂತಾದವರು ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕಾಲ್ತುಳಿತಕ್ಕೆ ನಿಜವಾಗಿ ಕಾರಣ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಮೃತರ ಕುಟುಂಬಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರಿಗೆ ತಲಾ ೧ ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ತಮಿಳುನಾಡಿನ ಯಾವುದೇ ರಾಜಕೀಯ ರ‍್ಯಾಲಿಯಲ್ಲಿ ಇಂಥ ದೊಡ್ಡ ದುರಂತ ಎಂದಿಗೂ ಸಂಭವಿಸಿರಲಿಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಸಲು ನಿವೃತ್ತ ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.