ಸುದ್ದಿ

ಎಲ್ಲೆಂದರಲ್ಲಿ ಕಸ ಹಾಕೋ ಸಮಸ್ಯೆ ನಿವಾರಣೆಗೆ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ: ಡಿಸಿಎಂ ಡಿ.ಕೆ.ಶಿವಕುಮಾರ್

Share It

ಬೆಂಗಳೂರು:”ರಸ್ತೆಬದಿ ಕಸ ಎಸೆದರೆ ಮತ್ತೆ ಅದು ಮರಳಿ ನಿಮ್ಮ ಮನೆಗೇ ಬರುತ್ತದೆ ಎನ್ನುವ ಎಚ್ಚರಿಕೆ ನೀಡುವುದರ ಜೊತೆಗೆ, ಇನ್ನೂ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸ್ ಇಲಾಖೆ‌ ಹಾಗೂ ಪಾಲಿಕೆ ನೆರವಿನಿಂದ ಅಳವಡಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದ ಬಳಿಯ ಭುವನೇಶ್ವರಿ ಪ್ರತಿಮೆ ಬಳಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದರು. ನಗರದಾದ್ಯಂತ ಎಲ್ಲೆಂದರಲ್ಲಿ ಕಸದ ರಾಶಿ ಇರುವ ಸಮಸ್ಯೆ ಕುರಿತು ಟೀಕೆ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದಾಗ, “ಈಗಾಗಲೇ‌‌ ಸಾಕಷ್ಟು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದ ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಗುರುತಿಸಿ ಅವರ ಮನೆ ಮುಂದೆಯೇ ಅದೇ ಕಸ ಸುರಿದು ಬುದ್ದಿವಾದ ಹೇಳುವ ಕೆಲಸ ಮಾಡಲಾಗುತ್ತಿದೆ. ಕಸ ಎಸೆಯುವವರಿಗೆ ದಂಡ ವಿಧಿಸುವ ಕೆಲಸವೂ ನಡೆಯುತ್ತಿದೆ. ಈಗಾಗಲೇ ಲಕ್ಷಾಂತರ ರೂಪಾಯಿ ದಂಡ ಸಂಗ್ರಹಿಸಲಾಗಿದೆ” ಎಂದರು.

ಮುಂಬೈನಲ್ಲೂ ಮೂಲೆ,‌ ಮೂಲೆಯಲ್ಲಿ ಕಸದ ರಾಶಿ: “ಶುಕ್ರವಾರದಂದು ಮುಂಬೈಗೆ ತೆರಳಿದ್ದೆ. ಅಲ್ಲಿಯೂ ಸಹ ಮೂಲೆ,‌ ಮೂಲೆಯಲ್ಲಿ ಕಸ ರಾಶಿ ಬಿದ್ದಿತ್ತು. ಬೇರೆ, ಬೇರೆ ಕಡೆಯಲ್ಲಿಯೂ ಬಿದ್ದಿರಬಹುದು. ಜನರು ತಮಗೆ ಇರುವ ಅವಕಾಶವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಎಲ್ಲೆಂದರಲ್ಲಿ ಕಸ ಎಸೆಯುವುದನ್ನು ನಿಲ್ಲಿಸಬೇಕು. ಜನರು ಸ್ವಚ್ಚ ಬೆಂಗಳೂರಿಗೆ ಹೆಚ್ಚು ಸಹಕಾರ ನೀಡಬೇಕು” ಎಂದರು.

“ಮುಂಬೈ ನಗರದಲ್ಲಿ ಪ್ರಮುಖ ರಸ್ತೆಗಳ ಕಾಮಗಾರಿ ಹಾಗೂ ನಿರ್ವಹಣೆ ನಡೆಸಿದವರಿಗೆ ಆ ರಸ್ತೆ ಬದಿಗಳ ಕಸ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ನೀಡಲಾಗಿದೆ ಎನ್ನುವ ಮಾಹಿತಿಯಿದೆ. ಬೆಂಗಳೂರಿನಲ್ಲೂ ಈ ಮಾದರಿ ಜಾರಿ ಮಾಡುವ ಕುರಿತು ಚರ್ಚೆ ಮತ್ತು ಆಲೋಚನೆ ನಡೆಸಲಾಗುತ್ತಿದೆ” ಎಂದರು.

“ಡಬ್ಬಗಳನ್ನು ಇಟ್ಟುಕೊಂಡು ಮನೆಯ ಕಸವನ್ನು ಅದರಲ್ಲಿ ಸಂಗ್ರಹಿಸಿ. ಅವುಗಳನ್ನು ಕಡ್ಡಾಯವಾಗಿ ಕಸ ಸಂಗ್ರಹ ವಾಹನಗಳಿಗೆ ನೀಡಿ ಎಂದು ಮನವಿ ಮಾಡುತ್ತೇನೆ. ನಮ್ಮ ಅಧಿಕಾರಿಗಳು ಶುಕ್ರವಾರ ತಡರಾತ್ರಿವರೆಗೂ ನನಗೆ ಕಸ ವಿಲೇವಾರಿ ಸೇರಿದಂತೆ ಇದರ ಬಗ್ಗೆ ಮಾಹಿತಿ ನೀಡುತ್ತಿದ್ದರು” ಎಂದರು.

ಕಸ ಸಂಗ್ರಹಣೆಗೆ ಸರಿಯಾದ ವ್ಯವಸ್ಥೆಯಿಲ್ಲ ಎನ್ನುವ ನಾಗರಿಕರ ಆರೋಪದ ಬಗ್ಗೆ ಕೇಳಿದಾಗ, “ಇದೆಲ್ಲವೂ ಸುಳ್ಳು. ಪ್ರತಿದಿನವೂ ಮನೆಗಳಲ್ಲಿ ಕಸ ಸಂಗ್ರಹ ನಡೆಯುತ್ತಿದೆ. ಸಮಸ್ಯೆ ಎದುರಾಗಿದ್ದರೆ ಸೂಚಿತ ದೂರವಾಣಿ ಸಂಖ್ಯೆಗೆ ದೂರು ನೀಡಲಿ. ಇಡೀ ದೇಶದಲ್ಲಿಯೇ ಅತ್ಯುತ್ತಮ ವ್ಯವಸ್ಥೆ ರೂಪಿಸಿದ್ದೇವೆ. ಎಲ್ಲಾದರೂ ಕಸ, ರಸ್ತೆಗುಂಡಿ ಕಂಡರೆ ನಮಗೆ ಪೋಟೊ ಹಾಗೂ ಜಾಗ ಕಳಿಸಿ ಎನ್ನುವ ಅವಕಾಶ ನೀಡಿದ್ದೇವೆ. ಮಾಧ್ಯಮಗಳು ಪ್ರತಿದಿನ ಒಂದೊಂದು ರಸ್ತೆಗುಂಡಿ ಹಾಕುತ್ತಲೇ ಇರುತ್ತಾರೆ. ಎಷ್ಟೇ ಕೆಲಸ ಮಾಡಿದರೂ ರಸ್ತೆಗುಂಡಿ ಇದ್ದೇ ಇರುತ್ತದೆ. ವಾಹನಗಳು ಜರ್ಕ್ ಹೊಡೆದರೆ ರಸ್ತೆಗುಂಡಿ ಉಂಟಾಗುತ್ತದೆ. ಆದ ಕಾರಣಕ್ಕೆ ನಾವು ಈ ಸಮಸ್ಯೆ ನಿವಾರಣೆಗೆ ಏನೇನೊ ಪ್ರಯತ್ನ ಮಾಡುತ್ತಿದ್ದೇವೆ.

ಹತ್ತು ವರ್ಷ ಬಾಳಿಕೆ ಬರುವ ಡಾಂಬರ್ ರಸ್ತೆ ತಂತ್ರಜ್ಞಾನದ ಬಗ್ಗೆ ಆಲೋಚನೆ: “ಕನಿಷ್ಠ ಹತ್ತು ವರ್ಷ ಬಾಳಿಕೆ ಬರುವ ಡಾಂಬರ್ ರಸ್ತೆ ತಂತ್ರಜ್ಞಾನ ಬಳಸಿ ರಸ್ತೆ ನಿರ್ಮಾಣವು ಹೈದರಾಬಾದ್ ಸೇರಿದಂತೆ ಇತರೆಡೆ ಮಾಡಲಾಗುತ್ತಿದೆಯಂತೆ. ಇದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಕಾಮಗಾರಿ ನಡೆಸುವ ಯಂತ್ರಗಳು ಸಾಕಷ್ಟು ದುಬಾರಿಯಾದ‌ ಕಾರಣಕ್ಕೆ ಕನಿಷ್ಠ ಹತ್ತು ಕಿಲೋಮೀಟರ್ ಕಾಮಗಾರಿಗೆ ಅವಕಾಶ ನೀಡಬೇಕು ಎಂದು ಈ ತಂತ್ರಜ್ಞಾನ ಹೊಂದಿರುವವರು ತಿಳಿಸಿದ್ದಾರೆ. ಇದರ ಬಗ್ಗೆ ಚಿಂತನೆ ಮಾಡಲಾಗುತ್ತಿದೆ” ಎಂದರು.


Share It

You cannot copy content of this page