ನಿರ್ಮಾಣ ಹಂತದ ಕಟ್ಟಡದಿಂದ ಇಟ್ಟಿಗೆ ಬಿದ್ದು ಮಗು ಸಾವು, ಮೂವರಿಗೆ ಗಾಯ
ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಿಂದ ಸಿಮೆಂಟ್ ಇಟ್ಟಿಗೆಗಳು ಬಿದ್ದ ಪರಿಣಾಮ 4 ವರ್ಷದ ಮಗು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಹೆಚ್ಎಎಲ್ ಬಳಿಯ ಚಿನ್ನಪ್ಪನಹಳ್ಳಿಯಲ್ಲಿ ನಡೆದಿದೆ.
ನಾಲ್ಕನೇ ಮಹಡಿಯ ಶೆಡ್ ಮೇಲೆ ಇಟ್ಟಿಗೆಗಳು ಬಿದ್ದ ಪರಿಣಾಮ ಮನುಶ್ರಿ (4) ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಶ್ರಿಯಾನ್ (6), ಶೇಖರ್ (5) ಹಾಗೂ ಮಮತಾ (30) ಎಂಬವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀನಿವಾಸುಲು ಎಂಬವರಿಗೆ ಸೇರಿದ ಕಟ್ಟಡದ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಕಟ್ಟಡದ ಪಕ್ಕದಲ್ಲೇ ವಿಜಯಪುರ ಮೂಲದ ಕುಟುಂಬ ಶೀಟ್ ಮನೆಯಲ್ಲಿ ವಾಸವಾಗಿತ್ತು. ಕಾಮಗಾರಿ ಸಂದರ್ಭದಲ್ಲಿ 4ನೇ ಮಹಡಿಯಿಂದ ಆಕಸ್ಮಿಕವಾಗಿ 10-12 ಸಿಮೆಂಟ್ ಇಟ್ಟಿಗೆಗಳು ಕೆಳಗೆ ಬಿದ್ದಿವೆ. ಇಟ್ಟಿಗೆಗಳು ಕಟ್ಟಡದ ಪಕ್ಕದಲ್ಲೇ ಇದ್ದ ಮನೆಯ ಶೀಟ್ ಮೇಲೆ ಅಪ್ಪಳಿಸಿದ್ದು, ಮನೆಯಲ್ಲಿದ್ದ ಮನುಶ್ರಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.


