ಅಪರಾಧ ಸುದ್ದಿ

ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕಲ್ಲು ತೂರಾಟ: 8 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

Share It

ದಾವಣಗೆರೆ: ಜಿಲ್ಲೆಯ ಬೇತೂರು ರಸ್ತೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆಯ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 18 ಜನರಿಗೆ ನ್ಯಾಯಾಧೀಶರಾದ ಪ್ರಶಾಂತ್‌ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ ಸಮಿತಿಯ 8 ಜನ ಸೇರಿ ಎರಡು ಕೋಮಿನ ಒಟ್ಟು 18 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿ ಬಿಗಿ ಪೊಲೀಸ್ ಭದ್ರತೆಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.

ದಾವಣಗೆರೆಯ ಎಂಸಿಸಿ ʻಎʼ ಬ್ಲಾಕ್‌ನಲ್ಲಿರುವ ನ್ಯಾಯಾಧೀಶರಾದ ಪ್ರಶಾಂತ್ ಅವರ ನಿವಾಸದಲ್ಲಿ ಆರೋಪಿಗಳನ್ನು ಹಾಜರುಪಡಿಸಿದ್ದರು. ಆರೋಪಿಗಳ ವಿಚಾರಣೆ ಬಳಿಕ 18 ಜನರಿಗೆ ನ್ಯಾಯಾಧೀಶರು 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದರು.

ಏನಿದು ಗಲಭೆ ಪ್ರಕರಣ?
ದಾವಣಗೆರೆಯ ಮುದ್ದ ಬೋವಿ ಕಾಲೋನಿ ಹಾಗೂ ವೆಂಕಬೋವಿ ಕಾಲೋನಿಯ ಗಣೇಶ ಮೆರವಣಿಗೆ ನಡೆಯುವಾಗ ಕಲ್ಲು ತೂರಾಟ ನಡೆದಿತ್ತು. ಘಟನೆಯಲ್ಲಿ ಪೊಲೀಸರೂ ಗಾಯಗೊಂಡಿದ್ದರು. ಕೂಡಲೇ ಮುಸ್ಲಿಂ ಮುಖಂಡರು ಪರಿಸ್ಥಿತಿಯನ್ನು ನಿಯಂತ್ರಣಗೊಳಿಸಿದ್ದರು.

ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸಾಗಿದ ಮೂರು ಕಡೆಗಳಲ್ಲಿ ಕಲ್ಲು ತೂರಾಟ ನಡೆಸಲಾಗಿತ್ತು. ಕೂಡಲೇ ಪೊಲೀಸರು ಇಡೀ ನಗರದಲ್ಲಿ ಸಂಚಾರ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದರು. ಶುಕ್ರವಾರ ಬೆಳಗಿನ ವೇಳೆಗೆ ಘಟನೆಗೆ ಕಾರಣರಾದವರನ್ನ ಬಂಧಿಸಿದ್ದರು.

ಕಲ್ಲು ತೂರಾಟಕ್ಕೆ ಕಾರಣ ಏನು?
ಕಳೆದ 2 ದಿನಗಳ ಹಿಂದೆ ಹಿಂದೂ ಮುಖಂಡರು ನಾಗಮಂಗಲ ಕಲ್ಲುತೂರಾಟ ಪ್ರಕರಣ ಹಾಗೂ ಈದ್ ಮಿಲಾದ್ ಮೆರವಣಿಗೆಯಲ್ಲಿ ಪ್ಯಾಲೆಸ್ತೀನ್‌ ಧ್ವಜ ಪ್ರದರ್ಶನ ಮಾಡಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ್ಯ ಸಂಚಾಲಕ ಸತೀಶ್ ಪೂಜಾರ್ ವಿವಾದಾತ್ಮಕ ಹೇಳಿಕೆ‌ ನೀಡಿದ್ದರು.

ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಮುಸ್ಲಿಂ ಮುಖಂಡನೊಬ್ಬ ತಾಕತ್ ಇದ್ದರೆ ಬೇತೂರು ರಸ್ತೆಗೆ ಬಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಗುರುವಾರ ಗಣೇಶ ಮೆರವಣಿಗೆಯಲ್ಲಿ ಸತೀಶ್ ಪೂಜಾರಿ ಭಾಗವಹಿಸಿದ್ದರು.

ಮೆರವಣಿಗೆ ಸಾಗುವ ಅರಳಿಮರ ಸರ್ಕಲ್ ಬಳಿ ಭಾರೀ ಸಂಖ್ಯೆಯಲ್ಲಿ ಮುಸ್ಲಿಮರು ಸೇರಿದ್ದರು. ಗಣೇಶನ ಮೆರವಣಿಗೆ ಹೋಗುತ್ತಿದ್ದಾಗ ಇಸ್ಲಾಂ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ.

ಈ ವೇಳೆ ಕಲ್ಲು ತೂರಾಟ ನಡೆದಿದೆ. ಈ ವೇಳೆ ಮುಸ್ಲಿಂ ಮುಖಂಡರೇ ಜನಸಂದಣಿಯನ್ನು ನಿಯಂತ್ರಣ ಮಾಡಿದ್ದಾರೆ. ನಂತರ ಕೆ.ಆರ್ ರಸ್ತೆ ಹಂಸಭಾವಿ ಸರ್ಕಲ್ ನಲ್ಲಿ ಕಲ್ಲು ತೂರಾಟ ನಡೆದಿದೆ.


Share It

You cannot copy content of this page