ಬೆಂಗಳೂರು: ಬರೋಬ್ಬರಿ 102 ದಿನಗಳ ನಂತರ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ-2 ಆರೋಪಿ ನಟ ದರ್ಶನ್ ತೂಗುದೀಪ್ ಅವರು ಕೊನೆಗೂ ಇಂದು ಮಧ್ಯಾಹ್ನ ಜಾಮೀನು ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.
ಇಂದು ಬಳ್ಳಾರಿಯ ಸೆಂಟ್ರಲ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಪರ ವಕೀಲ ಸುನೀಲ್ ಅವರು ಬೆಂಗಳೂರಿನ ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದರು.
ದರ್ಶನ್ ಜಾಮೀನು ಅರ್ಜಿ ಸ್ವೀಕರಿಸಿರುವ 57ನೇ ಸಿಸಿಎಚ್ ಕೋರ್ಟಿನ ನ್ಯಾಯಾಧೀಶರು ಜಾಮೀನಿಗೆ ಅರ್ಜಿಗೆ ಆಕ್ಷೇಪಣೆ ಕೋರಿ ಪ್ರತಿವಾದ ಮಂಡಿಸಲು ಪಿಪಿಪಿ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಇನ್ನು ಕೆಲವೇ ಕ್ಷಣಗಳಲ್ಲಿ ದರ್ಶನ್ ಜಾಮೀನು ಅರ್ಜಿಯ ವಿಚಾರಣೆ ಸೆಷನ್ಸ್ ಕೋರ್ಟ್ ನಲ್ಲಿ ಆರಂಭವಾಗಲಿದೆ. ಆದರೆ ಈ ಜಾಮೀನು ಅರ್ಜಿ ವಿಚಾರಣೆ ಕನಿಷ್ಟ ಪಕ್ಷ ಒಂದು ವಾರದವರೆಗೆ ನಡೆಯುವ ಸಾಧ್ಯತೆ ಇದೆ.
ಸದ್ಯ ದರ್ಶನ್ ಅವರು ಈ ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡಲು ನಿರ್ಮಾಪಕರು ಮತ್ತು ಪ್ರಭಾವೀ ರಾಜಕಾರಣಿಗಳನ್ನು ಬಳಸಿಕೊಳ್ಳಬಹುದು, ಆದ್ದರಿಂದ ದರ್ಶನ್ ಅವರಿಗೆ ತನಿಖೆ ಮುಗಿಯುವವರೆಗೂ ಜಾಮೀನು ನೀಡಬಾರದು ಎಂದು ಆಕ್ಷೇಪಣೆ ಅರ್ಜಿ ಸಲ್ಲಿಸಿ ಎಸ್.ಪಿ.ಪಿ ಕಡೆಯಿಂದ ಪ್ರತಿ ವಾದ ನಡೆಯುವ ಸಾಧ್ಯತೆ ಇದೆ.