ಕೊಪ್ಪಳ: ಗಣೇಶ ವಿಸರ್ಜನೆ ವೇಳೆ ಯುವಕರ ಗುಂಪುಗಳ ನಡುವೆ ಗಲಾಟೆಯಾಗಿದ್ದು ಗಲಾಟೆ ವೇಳೆ ಓರ್ವನಿಗೆ ಚಾಕು ಇರಿತ, ಮೂವರ ಮೇಲೆ ಹಲ್ಲೆ ನಡೆಸಲಾಗಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ತಡರಾತ್ರಿ ನಡೆದಿದೆ.
ಗಣೇಶ ಮೂರ್ತಿ ಮೆರವಣಿಗೆ ವೇಳೆ ಡ್ಯಾನ್ಸ್ ಮಾಡುವಾಗ ಗಲಾಟೆ ನಡೆದಿದೆ. ಈ ವೇಳೆ ಶಿವು(38) ಎಂಬಾತನಿಗೆ ಚಾಕು ಇರಿಯಲಾಗಿದೆ. ಗಣೇಶ್, ಮಂಜು, ಸಾಗರ್ ಮೇಲೆ ಹಲ್ಲೆ ನಡೆದಿದೆ.
ಗಂಗಾವತಿ ನಗರದ ಯಶೋಧ ಆಸ್ಪತ್ರೆ ಎದುರು ಸೋಮವಾರ ತಡ ರಾತ್ರಿ ಘಟನೆ ನಡೆದಿದ್ದು, ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಡಾನ್ಸ್ ಮಾಡುತ್ತಿದ್ದ ಯುವಕರ ನಡುವೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು ಚಾಕು ಇರಿಯಲಾಗಿದೆ.
ಚಾಕು ಇರಿತಕ್ಕೋಳಗಾದ ಶಿವುನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಗಾವತಿ ತಾಲೂಕು ಆಸ್ಪತ್ರೆಯಲ್ಲಿ ಇನ್ನುಳಿದ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ. ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

