ಕೊನೆಗೂ ವೈಯಾಲಿಕಾವಲ್ ಮಹಿಳೆಯ ಕೊಲೆ ರಹಸ್ಯ ಬಯಲು!

Share It

ಬೆಂಗಳೂರು: ಆಕೆಯ ವರ್ತನೆಯಿಂದ ಬೇಸತ್ತು ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮಿಯನ್ನು ಆರೋಪಿ ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಬಂಧನದ ಭೀತಿಯಿಂದ ಆರೋಪಿ ಮುಕ್ತಿ ರಂಜನ್‌ ರಾಯ್‌ ತನ್ನ ಊರಾದ ಒಡಿಶಾಗೆ ಹೋಗಿ ಆತಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೂ ಮುನ್ನ ಆರೋಪಿ ಬರೆದಿರುವ ಡೆತ್‌ನೋಟ್‌ನಲ್ಲಿ ಈ ಅಂಶ ಕಂಡುಬಂದಿದೆ.

ಸೆ. 2ರಂದು ಮಹಾಲಕ್ಷ್ಮೀಗೆ ವಾರದ ರಜೆ ಇದ್ದ ಕಾರಣ ಮನೆಯಲ್ಲೇ ಇದ್ದರು. ಆ ಸಂದರ್ಭದಲ್ಲಿ ಮುಕ್ತಿ ರಂಜನ್‌ ಆಕೆಯ ಮನೆಗೆ ಹೋಗಿದ್ದಾನೆ. ಯಾವುದೋ ವಿಚಾರಕ್ಕೆ ಅವರಿಬ್ಬರ ನಡುವೆ ಜಗಳವಾಗಿದ್ದು, ಆ ವೇಳೆ ಮಹಾಲಕ್ಷ್ಮೀ ಆತನ ಮೇಲೆ ಹಲ್ಲೆ ಮಾಡಿದ್ದಾಳೆ.

ಇದರಿಂದ ಕೋಪಗೊಂಡ ಮುಕ್ತಿರಂಜನ್‌ ಚಾಕು ತೆಗೆದುಕೊಂಡು ಮಹಾಲಕ್ಷ್ಮೀಯ ಕತ್ತು ಕೊಯ್ದು ಕೊಲೆ ಮಾಡಿ ನಂತರ ಸ್ನಾನದ ಮನೆಗೆ ಶವವನ್ನು ಎಳೆದೊಯ್ದು ಆಕ್ಸಲ್‌ ಬ್ಲೇಡ್‌ನಿಂದ ಬರೋಬ್ಬರಿ 59 ತುಂಡುಗಳಾಗಿ ಕೊಯ್ದು ವಾಸನೆ ಬಾರದಂತೆ ಯಾವುದೋ ರಾಸಾಯನಿಕ ಸಿಂಪಡಿಸಿ ಫ್ರಿಡ್ಜ್ ನಲ್ಲಿ ತರಕಾರಿ ಜೋಡಿಸುವಂತೆ ಜೋಡಿಸಿ ಮನೆಯನ್ನೆಲ್ಲಾ ರಾಸಾಯನಿಕದಿಂದ ಸ್ವಚ್ಛಗೊಳಿಸಿ ಬೀಗ ಹಾಕಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದ.

ಈ ಭೀಕರ ಕೊಲೆ ಬೆಳಕಿಗೆ ಬರುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ವೈಯಾಲಿಕಾವಲ್‌ ಠಾಣೆ ಪೊಲೀಸರು ಆರೋಪಿ ಬಂಧನಕ್ಕೆ 6 ತಂಡಗಳನ್ನು ರಚಿಸಿ ತನಿಖೆ ಕೈಗೊಂಡು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿ ಕಾರ್ಯಾನ್ಮುಖರಾಗಿದ್ದರು.

ಆರೋಪಿಯು ಹೊರರಾಜ್ಯದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಒಂದು ತಂಡ ಒಡಿಶಾಗೆ ಹೋಗಿ ಹುಡುಕಾಟ ನಡೆಸುತ್ತಿರುವಾಗಲೇ ಆತ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಗೊತ್ತಾಗಿದೆ.

ಒಡಿಶಾದ ಫಂಡಿ ಗ್ರಾಮದ ನಿವಾಸಿಯಾದ ಮುಕ್ತಿ ರಂಜನ್‌ ರಾಯ್‌ ಮೊನ್ನೆ ತನ್ನ ಮನೆಗೆ ಹೋಗಿ ಕೆಲಹೊತ್ತು ಅಲ್ಲೇ ಇದ್ದು, ರಾತ್ರಿ ತನ್ನ ಲ್ಯಾಪ್‌ಟಾಪ್‌ ಸಮೇತ ಸ್ಕೂಟಿ ದ್ವಿಚಕ್ರ ವಾಹನ ತೆಗೆದುಕೊಂಡು ಹೊರಗೆ ಹೋಗಿದ್ದನು. ಆದರೆ ಈತ ಎಲ್ಲಿಗೆ ಹೋದ ಎಂಬುವುದು ಕುಟುಂಬದವರ್ಯಾರಿಗೂ ಗೊತ್ತಾಗಿಲ್ಲ.

ಈ ನಡುವೆ ನಿನ್ನೆ ಕುಳೆಪಾದ ಎಂಬ ಸ್ಮಶಾನದಲ್ಲಿ ಆರೋಪಿ ಮುಕ್ತಿರಂಜನ್‌ ರಾಯ್‌ ಶವ ಮರದ ಕೊಂಬೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಅಲ್ಲಿನ ದುಶಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಬಂಧನಕ್ಕಾಗಿ ಒಡಿಶಾ ರಾಜ್ಯಕ್ಕೆ ತೆರಳಿದ್ದ ನಗರ ಪೊಲೀಸ್‌‍ ತಂಡಕ್ಕೆ ಸ್ಥಳೀಯ ಪೊಲೀಸರಿಂದ ಮಾಹಿತಿ ಗೊತ್ತಾಗಿದೆ. ಆರೋಪಿ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಸಿಕ್ಕಿರುವ ಡೈರಿಯಲ್ಲಿ ಡೆತ್‌ನೋಟ್‌ ಪತ್ತೆಯಾಗಿದೆ.

ಡೆತ್‌ನೋಟ್‌ ಸಾರಾಂಶ: ಸೆಪ್ಡೆಂಬರ್ 2ರಂದು ನಾನು ಆಕೆಯ ಮನೆಗೆ ಹೋದಾಗ ವೈಯಕ್ತಿಕ ವಿಚಾರಗಳಿಗೆ ಆಕೆ ಜೊತೆ ಜಗಳವಾಯಿತು. ಆಗ ನನ್ನ ಮೇಲೆ ಆಕೆ ಹಲ್ಲೆ ನಡೆಸಿದಳು. ಇದರಿಂದ ನಾನು ಕೋಪಗೊಂಡು ಆಕೆಯನ್ನು ಕೊಂದೆ. ಆ ಬಳಿಕ ಮೃತದೇಹವನ್ನು 59 ಪೀಸ್‌‍ಗಳನ್ನಾಗಿ ಮಾಡಿ ಫ್ರಿಡ್ಜ್ ನಲ್ಲಿರಿಸಿದೆ. ಆಕೆಯ ವರ್ತನೆಯಿಂದ ಬೇಸತ್ತು ಕೃತ್ಯ ಎಸಗಿದ್ದೇನೆ ಎಂದು ಡೆತ್‌ನೋಟ್‌ನಲ್ಲಿ ಕೊಲೆ ಮಾಡಲು ಕಾರಣವೇನೆಂಬುವುದನ್ನು ಆರೋಪಿ ಬಹಿರಂಗಪಡಿಸಿದ್ದಾನೆ.

ಇನ್ನು ಮುಕ್ತಿರಂಜನ್‌ ರಾಯ್‌ ಊರಿನಲ್ಲಿ ಬೆಂಗಳೂರು ಪೊಲೀಸರ ತಂಡ ಬೀಡುಬಿಟ್ಟಿದ್ದು, ಸ್ಥಳೀಯ ಪೊಲೀಸರಿಂದ ಆರೋಪಿಯ ಬೆರಳಚ್ಚು ಹಾಗೂ ಡೆತ್‌ನೋಟ್‌ ಪ್ರತಿಯನ್ನು ಪಡೆಯಲಿದ್ದಾರೆ.


Share It

You May Have Missed

You cannot copy content of this page