ಬೆಂಗಳೂರು: ತಮಿಳುನಾಡಿನ ಕೃಷ್ಣಗಿರಿ ಸಮೀಪ ಕಾರ್ಯನಿರ್ವಹಿಸುತ್ತಿರುವ ಟಾಟಾ ಎಲೆಕ್ಟ್ರಾನಿಕ್ಸ್ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಟಾಟಾ ಐಫೋನ್ ಬಿಡಿಭಾಗಗಳ ತಯಾರಿಕಾ ಸಂಸ್ಥೆಯಲ್ಲಿ ಬೆಳಗ್ಗಿನ ಸುಮಾರು 5.30 ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಅನೇಕ ಕಾರ್ಮಿಕರು ಕಟ್ಟಡದಿಂದ ಹೊರಗೆ ಓಡಿ ಬಂದಿದ್ದಾರೆ.
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಕಾರ್ಮಿಕರು ಮಾತ್ರವೇ ಕಟ್ಟಡದಲ್ಲಿದ್ದು, ಅವರನ್ನು ರಕ್ಷಣೆ ಮಾಡಲಾಗಿದೆ. ಕೆಲವು ಕಾರ್ಮಿಕರು ಉಸಿರುಗಟ್ಟಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಏಳಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದಿದ್ದು, ಬೆಂಕಿ ನಂದಿಸುವ ಮತ್ತು ಕಾರ್ಮಿಕರ ರಕ್ಷಣೆ ನಡೆಸುವ ಕಾರ್ಯವನ್ನು ನಡೆಸಿದವು. ಈವರೆಗೆ ಯಾವುದೇ ಸಾವಿನ ವರದಿಯಾಗಿಲ್ಲ. ಘಟನೆಗೆ ನಿಖರ ಕಾರಣ ಏನೆಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಘಟಕದಲ್ಲಿ ಭಾರಿ ಪ್ರಮಾಣದ ಹೊಗೆ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಪ್ರದೇಶದ ಜನರು ಆತಂಕಗೊಂಡಿದ್ದಾರೆ. ಬೆಂಕಿ ನಂದಿಸುವ ಕಾರ್ಯ ಈವರೆಗೆ ನಡೆಯುತ್ತಿದ್ದು, ಒಳಗೆ ಸಿಲುಕಿದ್ದ ಬಹುತೇಕ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.