ಮುಡಾ ಪ್ರಕರಣದ ತನಿಖೆ ಆರಂಭಿಸಿದ ಲೋಕಾಯುಕ್ತ ಪೊಲೀಸರು
ಮೈಸೂರು: ಮುಡಾ ನಿವೇಶನ ಹಂಚಿಕೆ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲಿಸಿದ್ದ ಮೈಸೂರು ಲೋಕಾಯುಕ್ತ ಪೊಲೀಸರು ಇಂದು ತನಿಖೆ ಆರಂಭಿಸಿದ್ದಾರೆ.
ದೂರುದಾರ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಕರೆದುಕೊಂಡು ಹೋಗಿ ಮುಡಾ ನಿವೇಶನ ಬಳಿ ಸ್ಥಳ ಮಹಜರು ನಡೆಸಿದ್ದಾರೆ. ಮುಡಾ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಅವರ ಹೆಸರಿಗೆ ವರ್ಗಾವಣೆಯಾದ ಸೈಟ್ ವ್ಯವಹಾರದಲ್ಲಿ ಅಕ್ರಮವಾಗಿದೆಯೇ ಎಂಬ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಇತ್ತ ಲೋಕಾಯುಕ್ತ ಮುಡಾ ಅಕ್ರಮ ಪ್ರಕರಣದ ತನಿಖೆ ಚುರುಕುಗೊಳಿಸಿದೆ. ಕೆಸರೆ ಸರ್ವೆ ನಂ.464ರ 3.16 ಎಕರೆ ಜಮೀನಿಗೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ದೂರುದಾರ ಸ್ನೇಹಮಯಿ ಕೃಷ್ಣ ಜೊತೆ ಲೋಕಾಯುಕ್ತ ಟೀಂ ಭೇಟಿ ನೀಡಿದೆ.
ಲೋಕಾಯುಕ್ತ ಎಸ್ಪಿ ಟಿ.ಜೆ ಉದೇಶ್ ನೇತೃತ್ವದ ತಂಡ ಪರಿಶೀಲನೆ ನಡೆಸುತ್ತಿದ್ದು, ಅಧಿಕಾರಿಗಳು ಸ್ಥಳದಿಂದಲೇ ಮಾಹಿತಿ ಕಲೆ ಹಾಕುತ್ತಿದ್ದಾರೆ.


