ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ಸಹೋದರ ಮುಮ್ತಾಜ್ ಅಲಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿ ಆರು ಮಂದಿಯ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಾಪತ್ತೆಯಾದ ಮುಮ್ತಾಜ್ ಆಲಿ ಸಹೋದರ ಹೈದರ್ ದೂರು ಆಧರಿಸಿ ರೆಹಮತ್, ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶೋಯೆಬ್ ಹಾಗೂ ಸಿರಾಜ್ ವಿರುದ್ದ ಎಫ್ಐಆರ್ ದಾಖಲಿಸಿದ್ದು, ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಹೋದರ ಮುಮ್ತಾಜ್ ಅಲಿ ಅವರ ಗೌರವ ಹಾಳು ಮಾಡಲು ಮಹಿಳೆಯನ್ನು ಬಳಸಿಕೊಂಡು ಷಡ್ಯಂತ್ರ ರೂಪಿಸಿದ್ದಾರೆ. ಮುಮ್ತಾಜ್ ಆಲಿ ಅವರಿಗೆ ಅಕ್ರಮ ಸಂಬಂಧ ಇದೆ ಎಂದು ರೆಹಮತ್ ಸುಳ್ಳು ಪ್ರಚಾರ ಮಾಡಿ ಬೆದರಿಕೆ ಹಾಕಿದ್ದಾನೆ. 2024ರ ಜುಲೈನಿಂದ ಈವರೆಗೆ ಮುಮ್ತಾಜ್ ಅಲಿ ಅವರಿಂದ 50 ಲಕ್ಷ ರೂ. ವಸೂಲಿ ಮಾಡಿದ್ದಾರೆ. 25 ಲಕ್ಷ ರೂ. ಹಣವನ್ನು ಮಹಿಳೆ ಚೆಕ್ ಮೂಲಕ ಪಡೆದಿದ್ದಾಳೆ ಎನ್ನಲಾಗಿದೆ.
ಸತ್ತಾರ್ ಎಂಬಾತ ಮುಮ್ತಾಜ್ ಅಲಿಯ ರಾಜಕೀಯ ವಿರೋಧಿಯಾಗಿದ್ದಾನೆ. ಅಕ್ರಮ ಸಂಬಂಧ ಇದೆ ಎಂದು ನಿರಂತರ ಬ್ಲ್ಯಾಕ್ ಮೇಲ್ ಮಾಡಿದ್ದರು. ಜೀವ ಬೆದರಿಕೆ ಜೊತೆಗೆ ಮುಮ್ತಾಜ್ ಆಲಿ ಕುಟುಂಬಕ್ಕೂ ಬೆದರಿಸಿದ್ದರು. ಹೀಗಾಗಿಯೇ ಸಹೋದರ ಮುಮ್ತಾಜ್ ಆಲಿ ಮೆಸೇಜ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮುಮ್ತಾಜ್ ಅಲಿ ಸಹೋದರ ಹೈದರ್ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ರವಿವಾರ ರಾತ್ರಿ ಮುಮ್ತಾಜ್ ಅಲಿ ಮನೆಯಲ್ಲಿ ಗಲಾಟೆಯಾಗಿದೆ. ಸೋಮವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಯಾರಿಗೂ ತಿಳಿಯದಂತೆ ತನ್ನ ಬಿಎಂಡಬ್ಲ್ಯೂ ಕಾರನ್ನು ಚಲಾಯಿಸಿಕೊಂಡು ಪಣಂಬೂರು ಬಳಿ ಬಂದಿದ್ದಾರೆ. ಅಲ್ಲಿಂದ ಕೂಳೂರು ಹೈವೆಯಲ್ಲಿ ಬರುತ್ತಿದ್ದಾಗ ಖಾಸಗಿ ಬಸ್ಸೊಂದಕ್ಕೆ ಕಾರು ಡಿಕ್ಕಿ ಹೊಡೆದಿದೆ. ಬಳಿಕ ಯೂಟರ್ನ್ ತೆಗೆದುಕೊಂಡು ಬಂದು ಕೂಳೂರು ಸೇತುವೆಯ ಮಧ್ಯದಲ್ಲಿ ಕಾರನ್ನು ನಿಲ್ಲಿಸಿ ನಾಪತ್ತೆಯಾಗಿದ್ದಾರೆ.
ಹೀಗಾಗಿ ಸೇತುವೆಯಿಂದ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ಶಂಕಿಸಲಾಗಿದೆ. ಹೀಗಾಗಿ ವಿವಿಧ ತಂಡಗಳಿಂದ ನದಿಯಲ್ಲಿ ಹುಡುಕಾಡುವ ಪ್ರಯತ್ನ ಮುಂದುವರೆದಿದೆ.
ಮುಮ್ತಾಜ್ ಅಲಿ ನಾಪತ್ತೆ ಹಿಂದೆ ಅದೊಂದು ಮಹಿಳೆಯ ಕೈವಾಡ ಇದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಸುರತ್ಕಲ್ ಕೃಷ್ಣಾಪುರ ನಿವಾಸಿ ಮಹಿಳೆ ಕಳೆದ ಒಂದು ವರ್ಷದಿಂದ ಮುಮ್ತಾಜ್ ಅಲಿ ಅವರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಳಂತೆ. ಮುಮ್ತಾಜ್ ಅಲಿ ಅವರ ಖಾಸಗಿ ವಿಡಿಯೋ ಇಟ್ಟುಕೊಂಡು ಮದುವೆ ಆಗುವಂತೆ ಮಹಿಳೆ ಬ್ಲಾಕ್ ಮೇಲ್ ಮಾಡುತ್ತಿದ್ದಳು ಎನ್ನಲಾಗಿದೆ.
ಇತ್ತೀಚಿಗೆ ಮಸೀದಿ ಕಮಿಟಿ ವಿಚಾರದಲ್ಲಿ ಕಾಟಿಪಳ್ಳದ ಮೂವರು ಯುವಕರು ಆ ಮಹಿಳೆಗೆ ಸಾಥ್ ನೀಡಿ ಹೆಸರು ಕೆಡಿಸಲು ತಯಾರಿ ನಡೆಸಿದ್ದರಂತೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.