ದಾವಣಗೆರೆ: ತನ್ನ ಮನೆಯಲ್ಲಿ ತಾನೇ ಕದ್ದು ಕಳ್ಳತನದ ನಾಟಕವಾಡಿ ಪೊಲೀಸರಿಗೆ ದೂರು ನೀಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಗರಬನ್ನಿಹಟ್ಟಿ ಗ್ರಾಮದಲ್ಲಿ ನಡೆದಿದೆ.
ತಸ್ಮೀಯ ಖಾನಂ(26) ಹಾಗೂ ಮುಜೀಬುಲ್ಲಾ ಶೇಖ್ ನನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 9.5 ಲಕ್ಷ ಮೌಲ್ಯದ 155 ಗ್ರಾಂ ಚಿನ್ನದ ಆಭರಣ ಹಾಗೂ 1.27 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ.
ಸೆ. 30ರಂದು ಘಟನೆ ನಡೆದಿದ್ದು, ಶಿವಮೊಗ್ಗದ ಇಲಿಯಾಜ್ ನಗರದ ನಿವಾಸಿ ಮುಜೀಬುಲ್ ಶೇಖ್ ಜತೆ ಸೇರಿ ತಸ್ಮೀಯ ಖಾನಂ ತನ್ನದೇ ಮನೆಯ ಕಳ್ಳತನ ಮಾಡಿದ್ದಳು. ಬಳಿಕ ಮನೆಯಲ್ಲಿ ತಾನು ಒಬ್ಬಳೇ ಇದ್ದಾಗ ಯಾರೋ ಬಂದು ಮುಖಕ್ಕೆ ಬೂದಿ ಹಾಗೂ ಕೆಮಿಕಲ್ ಹಾಕಿ ಪ್ರಜ್ಞೆ ತಪ್ಪಿಸಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ದಾಖಲಿಸಿದ್ದಳು.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಚನ್ನಗಿರಿ ಇನ್ಸ್ ಪೆಕ್ಟರ್ ಬಾಲಚಂದ್ರ ನಾಯ್ಕ ತಂಡ ಫೋನ್ ಕಾಲ್ ಮಾಹಿತಿ ಮೇಲೆ ಮುಜೀಬುಲ್ನನ್ನು ವಶಕ್ಕೆ ಪಡೆದಿದ್ದರು. ನಂತರ ತಸ್ಮೀಯ ಖಾನಂ ತಾನು ಮಾಡಿದ ಕಳ್ಳತನವನ್ನು ಒಪ್ಪಿಕೊಂಡಿದ್ದಾರೆ.