ಬೆಂಗಳೂರು: ಜಾತಿ ನಿಂದನೆ ಮತ್ತು ಕೊಲೆ ಬೆದರಿಕೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಕೋಲಾರ ಪೊಲೀಸರು ಬಂಧಿಸಿದ್ದಾರೆ.
ಗುತ್ತಿಗೆದಾರನಿಗೆ ಕೊಲೆ ಬೆದರಿಕೆ ಹಾಕಿದ್ದು ಹಾಗೂ ಆತನೊಂದಿಗೆ ಮತ್ತೊಬ್ಬ ವ್ಯಕ್ತಿಯ ಜಾತಿಯ ಕುರಿತು ಅವಾಚ್ಯವಾಗಿ ನಿಂದಿಸಿದ್ದ ಆಡಿಯೋ ಸಂಬಂಧ ಮುನಿರತ್ನ ವಿರುದ್ಧ ಕೊಲೆ ಬೆದರಿಕೆ ಹಾಗೂ ಜಾತಿನಿಂದನೆ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ವೈಯಾಲಿ ಕಾವಲ್ ಪೊಲೀಸರು ಮುನಿರತ್ನ ಮನೆ ಮತ್ತು ಕಚೇರಿಗೆ ತೆರಳಿ ಶೋಧ ನಡೆಸಿದ್ದರು. ದೂರು ಕೊಟ್ಟ ವ್ಯಕ್ತಿಯ ಜತೆಗೆ ತೆರಳಿ ಮಹಜರು ನಡೆಸಿದ್ದು, ಬಂಧನಕ್ಕೆ ಸಜ್ಜಾಗಿದ್ದರು.
ಬಂಧನದ ಸುಳಿವು ಪಡೆದ ಮುನಿರತ್ನ ತಲೆ ಮರೆಸಿಕೊಂಡು ಕೋಲಾರ ಕಡೆಗೆ ಹೊರಟಿದ್ದರು. ಖಚಿತ ಮಾಹಿತಿಯ ಮೇರೆಗೆ ಕೋಲಾರ ಪೊಲೀಸರು ಮುನಿರತ್ನ ಅವರನ್ನು ಬಂಧಿಸಿದ್ದು, ಬೆಂಗಳೂರು ಪೊಲೀಸರಿಗೆ ಹಸ್ತಾಂತರ ಮಾಡಲಿದ್ದಾರೆ.
ಮುನಿರತ್ನ ಅವರ ಆಡಿಯೋಗೆ ಸಂಬಂಧಿಸಿದಂತೆ ಅವರ ಧ್ವನಿ ಮಾದರಿ ಸಂಗ್ರಹ ಮಾಡಲಿರುವ ಪೊಲೀಸರು, ಅನಂತರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.