‘ನ್ಯಾಷನಲ್ ಸ್ಕೂಲ್ ಆಫ್ ಲಾ’ ದಲ್ಲಿ ತೃತೀಯ ಲಿಂಗಿಗಳಿಗೆ ಶೇ. 5 ರಷ್ಟು ಮೀಸಲಾತಿ
ಬೆಂಗಳೂರು: ನ್ಯಾಷನಲ್ ಸ್ಕೂಲ್ ಆಫ್ ಲಾ ದಲ್ಲಿ ಉದ್ಯೋಗ ಮೀಸಲಾತಿಯ ಮಾದರಿಯಲ್ಲಿಯೇ ತಾತ್ಕಾಲಿಕ ಶೇ. 5 ರಷ್ಟು ಮೀಸಲಾತಿ ನೀಡಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಮುಗಿಲ್ ಅನ್ಬು ವಸಂತ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ರವಿ ಹೊಸಮನಿ ಅವರಿದ್ದ ಪೀಠ, ಮುಂಬರುವ ಶೈಕ್ಷಣಿಕ ವರ್ಷದಿಂದ ಮೂರು ವರ್ಷದ ಎಲ್ ಎಲ್ ಬಿಗೆ ಶುಲ್ಕ ರಹಿತ ಅವಕಾಶ ಕಲ್ಪಿಸಬೇಕು. ಶುಲ್ಕ ಭರಿಸುವ ಸಲುವಾಗಿ ರಾಜ್ಯ ಅಥವಾ ಕೇಂದ್ರ ಸರಕಾರಕ್ಕೆ ಮನವಿ ಮಾಡಬಹುದು ಎಂದು ಪೀಠ ಅಭಿಪ್ರಾಯ ಪಟ್ಟಿದೆ.
ಮಧ್ಯಂತರ ಆದೇಶ ಈ ವರ್ಷಕ್ಕೆ ಮಾತ್ರ ಅನ್ವಯಿಸದೆ ಈಗಾಗಲೇ ಎಲ್ಲ ಸೀಟು ಭರ್ತಿಯಾಗಿದ್ದರೂ ಹೆಚ್ಚುವರಿ ವಿದ್ಯಾರ್ಥಿ ಎಂದು ಪರಿಗಣಿಸದೇ ಸೀಟು ನೀಡಬೇಕು ಎಂದು ತಾಕೀತು ಮಾಡಿದ್ದು, ತೃತೀಯ ಲಿಂಗಿಗಳ ಪ್ರವೇಶಾನುಮತಿ ವಿಚಾರದಲ್ಲಿ ವಿವಿಯ ನಡೆಯ ಬಗ್ಗೆ ಬೇಸರ ವ್ಯಕ್ತಪಡಿಸಿದೆ.
ಅರ್ಜಿದಾರರು 2023 ರಲ್ಲಿ ಎನ್ ಎಲ್ ಎಸ್ ಯು ನಲ್ಲಿ ಮೂರು ವರ್ಷದ ಎಲ್ ಎಲ್ ಬಿಗೆ ಅರ್ಜಿ ಸಲ್ಲಿಸಿದರು. ಪ್ರವೇಶ ಪರೀಕ್ಷೆಯಲ್ಲಿ ಶೇ. 96.25 ಅಂಕ ಪಡೆದರೂ, ಸೀಟು ಸಿಕ್ಕಿರಲಿಲ್ಲ. ಹೀಗಾಗಿ, ಸುಪ್ರೀಂ ಕೋರ್ಟ್ ತೀರ್ಪು ಹಾಗೂ ರಾಜ್ಯ ಸರಕಾರ ಮೀಸಲಾತಿ ನೀತಿಯನ್ವಯ ಮೀಸಲಾತಿ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಮೀಸಲಾತಿ ನೀಡುವಂತೆ ಐತಿಹಾಸಿಕ ತೀರ್ಪು ನೀಡಿದೆ.