ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣ ಹಿನ್ನೆಲೆಯಲ್ಲಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಸಂಬಂಧ ಸಿಐಡಿ ಅಧಿಕಾರಿಗಳು ಇಂದು ಕೋರ್ಟ್ ಗೆ 300 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಈ ಚಾರ್ಜ್ ಶೀಟ್ ನಲ್ಲಿ ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣದಲ್ಲಿ ನಿಮ್ಮ ಹೆಸರು ಬಂದಿದೆ. ಆದ್ದರಿಂದ ನಿಮ್ಮನ್ನು ಪೊಲೀಸರು ಬಂಧಿಸಬಹುದು ಎಂದು ನಿಗಮದ ಎಂ.ಡಿ ಆಗಿದ್ದ ಪದ್ಮನಾಭ ಹಾಗೂ ಮತ್ತೋರ್ವ ಅಧಿಕಾರಿ ಪರಶುರಾಮ ಅವರು ನಿಗಮದ ಅಧಿಕಾರಿಯಾಗಿದ್ದ ಚಂದ್ರಶೇಖರನ್ ಅವರಲ್ಲಿ ಭೀತಿ ಹುಟ್ಟಿಸಿದ್ದರು.
ಇದರಿಂದ ಭಾರೀ ಆತಂಕಕ್ಕೀಡಾದ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಐಡಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ಈಗಾಗಲೇ ನಿಗಮದ ಎಂ.ಡಿ. ಪದ್ಮನಾಭ ಮತ್ತು ಪರಶುರಾಮ ಅವರನ್ನು ಬಂಧಿಸಿದೆ.
ಈ ಹಗರಣದಲ್ಲಿ ಪ್ರಮುಖ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವರಾದ ಬಳ್ಳಾರಿ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷರಾಗಿದ್ದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅವರ ಹೆಸರಗಳನ್ನು ಮಾತ್ರ ತನಿಖಾ ವರದಿಯಲ್ಲಿ ಕೈಬಿಡಲಾಗಿದೆ.