ರಾಜಕೀಯ ಸುದ್ದಿ

ಮಾರ್ಗಮಧ್ಯದಲ್ಲಿ ನಮಾಜ್ ಮಾಡಿದ ಚಾಲಕ : ಸೂಕ್ತ ತನಿಖೆ ನಡೆಸಿ ಕ್ರಮಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ

Share It

ಬೆಂಗಳೂರು: ಮಾರ್ಗಮಧ್ಯೆ ನಮಾಜ್ ಮಾಡಿದ ಚಾಲಕನ ವಿಡಿಯೋ ವೈರಲ್ ಕುರಿತು ಸೂಕ್ತ ತನಿಖೆ ನಡೆಸಿ ಕ್ರಮವಹಿಸುವಂತೆ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದ್ದಾರೆ.

ಈ ಕುರಿತು ವ್ಯವಸ್ಥಾಪಕ ನಿರ್ದೇಶಕರು,
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ,
ಹುಬ್ಬಳ್ಳಿ ಇವರಿಗೆ ಪತ್ರ ಬರೆದಿರುವ ಸಚಿವರು, ಮಂಗಳವಾರ ಸಂಜೆ ಹುಬ್ಬಳ್ಳಿಯಿಂದ ಹಾವೇರಿಗೆ ಕಾರ್ಯಾಚರಣೆಯಾಗುತ್ತಿದ್ದ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಚಾಲಕ-ಕಂ-ನಿರ್ವಾಹಕ ಮಾರ್ಗ ಮಧ್ಯೆ ಬಸ್ ನಿಲ್ಲಿಸಿ ನಮಾಜ್ ಮಾಡಿರುವ ಬಗ್ಗೆ ಪ್ರಯಾಣಿಕರೊಬ್ಬರು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದು, ಭಾರಿ ವೈರಲ್ ಆಗಿದೆ. ಈ ಕುರಿತು ಸೂಕ್ತ ಮಾಹಿತಿ ಪಡೆದು ಕ್ರಮವಹಿಸಿ ಎಂದಿದ್ದಾರೆ.

ಈ ವಿಡಿಯೋ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಇಂತಹ ವರ್ತನೆ ತೋರಿರುವ ಕುರಿತು ಸಾರ್ವಜನಿಕರ ಟೀಕೆ ಕೇಳಿಬಂದಿದೆ. ಸರ್ಕಾರಿ ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಕೆಲವೊಂದು ನೀತಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕಾಗಿರುತ್ತದೆ ಎಂದು ತಿಳಿಸಿದ್ದಾರೆ.

ಪ್ರತಿಯೊಬ್ಬ ವ್ಯಕ್ತಿಗೂ ಧಾರ್ಮಿಕ ಸ್ವಾತಂತ್ರ್ಯದ‌ ಹಕ್ಕಿದ್ದರೂ ಸಹ ಸಾರ್ವಜನಿಕ ಸೇವೆಯಲ್ಲಿರುವವರು, ಕರ್ತವ್ಯದ ವೇಳೆ ಹೊರತುಪಡಿಸಿ ತಮ್ಮ‌ ತಮ್ಮ ಧರ್ಮವನ್ನು ಪಾಲಿಸಬಹುದಾಗಿರುತ್ತದೆ. ಆದರೆ, ಕರ್ತವ್ಯದ ಸಮಯದಲ್ಲಿ ಮಾರ್ಗಮಧ್ಯದಲ್ಲಿ ಬಸ್ ಅನ್ನು ನಿಲ್ಲಿಸಿ, ಬಸ್ ನಲ್ಲಿ ಪ್ರಯಾಣಿಕರು‌ ಇದ್ದಾಗ್ಯೂ ಸಹ ನಮಾಜ್ ಮಾಡಿರುವುದು ಆಕ್ಷೇಪಾರ್ಹ ಎಂದಿದ್ದಾರೆ.

ಈ ವಿಡಿಯೋ ಬಗ್ಗೆ ಕೂಡಲೇ ತನಿಖೆ ನಡೆಸಿ, ಸಂಬಂಧಪಟ್ಟ‌ ಸಿಬ್ಬಂದಿಯು ತಪ್ಪಿತಸ್ಥರೆಂದು ಕಂಡುಬಂದಲ್ಲಿ, ಸೂಕ್ತ ಶಿಸ್ತಿನ‌ ಕ್ರಮ ಜರುಗಿಸಲು ಸೂಚಿಸಿದೆ. ಇನ್ನು ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚನೆ ನೀಡಿದ್ದಾರೆ.


Share It

You cannot copy content of this page