ಸುದ್ದಿ

ಕನ್ನಡ ಹುಟ್ಟಿದ್ದು ತಮಿಳು ಭಾಷೆಯಿಂದ’ ಕಮಲ್ ಹಾಸನ್ ಹೇಳಿಕೆಗೆ ಕನ್ನಡಿಗರು ಕೆಂಡ

Share It

ಬೆಂಗಳೂರು: ‘ಥಗ್ ಲೈಫ್’ ಸಿನಿಮಾ ಪ್ರಚಾರದಲ್ಲಿರುವ ತಮಿಳು ನಟ ಕಮಲ್ ಹಾಸನ್ ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ‘ಕನ್ನಡ ಹುಟ್ಟಿದ್ದು ತಮಿಳು ಭಾಷೆಯಿಂದ’ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಕಮಲ್ ಹಾಸನ್ ಅವರು ಡಾ.ರಾಜ್‍ಕುಮಾರ್ ಅವರೊಂದಿಗಿನ ಒಡನಾಟವನ್ನು ಸ್ಮರಿಸುತ್ತಾ ಮಾತನಾಡುವಾಗ ‘ನಿಮ್ಮ ಕನ್ನಡ ಹುಟ್ಟಿದ್ದು ತಮಿಳು ಭಾಷೆಯಿಂದ’ ಎಂದಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಇದೇ ಕಾರ್ಯಕ್ರಮದಲ್ಲಿ ಕನ್ನಡದ ನಟ ಶಿವರಾಜ್‍ಕುಮಾರ್ ಕೂಡ ಭಾಗವಹಿಸಿದ್ದರು.

ಕಮಲ್ ಹಾಸನ್ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕನ್ನಡ ತಮಿಳಿನಿಂದ ಬಂದಿಲ್ಲ. ತಮಿಳಿಗಿಂತ ಕನ್ನಡ ಭಾಷೆಯೇ ಪುರಾತನವಾದದ್ದು ಎಂದು ಕನ್ನಡಿಗರು ಅಸಮಾಧಾನ ಹೊರಹಾಕಿದ್ದಾರೆ.

‘ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿಲ್ಲ ಎಂದು ವಿ.ಐ.ಸುಬ್ರಮಣಿಯನ್ ಸೇರಿದಂತೆ ಹಲವು ತಮಿಳಿನ ಪ್ರಸಿದ್ಧ ಭಾಷಾ ವಿಜ್ಞಾನಿಗಳೇ ಹೇಳಿದ್ದನ್ನು ನಟ ಕಮಲ್ ಹಾಸನ್ ಗಮನಿಸಿದಂತಿಲ್ಲ. ದ್ರಾವಿಡ ಭಾಷಾ ಕುಟುಂಬದಲ್ಲಿ 130ಕ್ಕೂ ಹೆಚ್ಚು ಭಾಷೆಗಳಿವೆ. ಈ ಎಲ್ಲಾ ಭಾಷೆಗಳಿಗೂ ಮೂಲವಾಗಿರಬಹುದಾದ ಪ್ರಾಗ್‌ ದ್ರಾವಿಡ ಭಾಷೆಯೊಂದನ್ನು(ಇದನ್ನು ಮೂಲ ದ್ರಾವಿಡ ಭಾಷೆ ಎಂದೂ ಕರೆಯಲಾಗಿದೆ) ಭಾಷಾ ವಿಜ್ಞಾನಿಗಳು ಪುನಾರಚಿಸಿದ್ದಾರೆ. ಕಾಲಾಂತರದಲ್ಲಿ ದ್ರಾವಿಡ ಭಾಷಾ ಗುಂಪಿನ ಜನರು ಬೇರೆ ಬೇರೆ ಕಡೆಗಳಲ್ಲಿ ಪಸರಿಸಿಕೊಂಡಾಗ ಭಾಷೆಯೂ ಸ್ವತಂತ್ರವಾಗಿ ಬೆಳೆಯತೊಡಗಿತು. ಹೀಗೆ ಮೂಲ ದ್ರಾವಿಡದಿಂದ ಮೊದಲು ಬೇರೆಯಾದ ಭಾಷೆ ಕುಯಿ ಮತ್ತು ತಮಿಳು. ಅವು ಇವತ್ತಿಗೂ ಮೂಲ ದ್ರಾವಿಡ ಭಾಷೆಯ ಅನೇಕ ಗುಣ ಲಕ್ಷಣಗಳನ್ನು ಹೊಂದಿವೆ. ಆಮೇಲೆ ತುಳು, ತದನಂತರ ಕನ್ನಡ, ತೆಲುಗು, ಮಲೆಯಾಳಂ- ಹೀಗೆ ಬೇರೆ ಬೇರೆ ಭಾಷೆಗಳು ಬೆಳೆದವು. ಇವುಗಳದ್ದು ಸೋದರ ಸಂಬಂಧವೇ ಹೊರತು ತಾಯಿ ಮಕ್ಕಳ ಸಂಬಂಧವಲ್ಲ’

-ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ.

ಕಮಲ್ ಹಾಸನ್ ಹೇಳಿಕೆಗೆ ಡಾ.ಮಹೇಶ್ ಜೋಶಿ ಖಂಡನೆ

ಸಿನೆಮಾವೊಂದರ ಪ್ರಚಾರದ ಸಂದರ್ಭದಲ್ಲಿ ತಮಿಳಿನಿಂದ ಕನ್ನಡ ಭಾಷೆಯು ಬಂದಿದೆ ಎಂದು ನಟ ಕಮಲ್ ಹಾಸನ್ ಅವರು ನೀಡಿರುವ ಹೇಳಿಕೆಯನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ ಜೋಶಿ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಪ್ರಕಟನೆ ನೀಡಿರುವ ಅವರು, ತಮ್ಮ ಭಾಷೆಯ ಮೇಲಿನ ಅಭಿಮಾನದಿಂದಲೋ, ಮಾಹಿತಿಯ ಕೊರತೆಯಿಂದಲೋ ಕಮಲ್ ಹಾಸನ್ ಈ ಹೇಳಿಕೆ ನೀಡಿರ ಬಹುದು. ತಮ್ಮ ಭಾಷೆಯವರನ್ನು ಮೆಚ್ಚಿಸಲು ಅವರು ನೀಡಿರ ಬಹುದಾದ ಈ ಹೇಳಿಕೆ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವಂತಿದೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

ಕನ್ನಡ ಪರಿಪೂರ್ಣ ಭಾಷೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ, ತನ್ನದೇ ಆದ ಲಿಪಿ, ಅಂಕಿಗಳು, ವ್ಯಾಕರಣವನ್ನು ಪಡೆದಿದೆ. ಇಲ್ಲಿ ಬರಹಕ್ಕೂ ಉಚ್ಚಾರಣೆಗೂ ನೇರ ಸಂಬಂಧವಿದೆ. ಜಗತ್ತಿನಲ್ಲಿಯೇ ಇಂತಹ ಸ್ವಂತಿಕೆಯನ್ನು ಹೊಂದಿರುವ ಭಾಷೆಗಳು ಬೆರಳೆಣಿಕೆಯಷ್ಟು, ತಮಿಳಿಗೆ ಇಂತಹ ಹೆಗ್ಗಳಿಕೆಗಳಿಲ್ಲ. ಹೀಗಾಗಿ ಕನ್ನಡಿಗರು ಈ ಕುರಿತು ಪ್ರತಿಕ್ರಿಯಿಸಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ ತಿಳಿಸಿದ್ದಾರೆ.

‘ಯಾವ ಭಾಷೆಯಿಂದ ಯಾವ ಭಾಷೆ ಹುಟ್ಟಿತು ಎಂಬುದನ್ನು ವ್ಯಾಖ್ಯಾನಿಸಲು ನಟ ಕಮಲ್ ಹಾಸನ್ ಇತಿಹಾಸ ತಜ್ಞರೇನೂ ಅಲ್ಲ. ಆದರೆ ಎರಡೂವರೆ ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ಕನ್ನಡ ಭಾಷೆ ಭಾರತದ ಭೂಪಟದಲ್ಲಿ ಸಮೃದ್ಧತೆಯನ್ನು ಸಂಕೇತಿಸುತ್ತದೆ, ಸೌಹಾರ್ದತೆ ಪ್ರತಿನಿಧಿಸುತ್ತಿದೆ. ಕನ್ನಡಿಗರು ಭಾಷಾ ದ್ವೇಷಿಗಳಲ್ಲ, ಆದರೆ ಕನ್ನಡ ನಾಡು, ನುಡಿ, ಜನ, ಜಲ, ವಿಚಾರಗಳು ಬಂದಾಗ ಸ್ವಾಭಿಮಾನವನ್ನು ಎಂದಿಗೂ ಬಲಿ ಕೊಟ್ಟಿಲ್ಲ ಎಂಬ ಸತ್ಯ ವಿವೇಕ ಸುಟ್ಟುಕೊಂಡವರಂತೆ ಮಾತನಾಡಿರುವ ಕಮಲ್ ಹಾಸನ್‍ಗೆ ನೆನಪಿರಲಿ. ಇದೀಗ ಆರೂವರೆ ಕೋಟಿ ಕನ್ನಡಿಗರ ಸ್ವಾಭಿಮಾನಕ್ಕೆ ಕೊಳ್ಳಿಯಿಟ್ಟು ಕನ್ನಡವನ್ನು ಅಪಮಾನಿಸಿದ್ದಾರೆ. ಈ ಕೂಡಲೇ ಕಮಲ್ ಹಾಸನ್ ಅವರು ಬೇಷರತ್ ಕನ್ನಡಿಗರ ಕ್ಷಮೆ ಕೇಳಬೇಕು’

-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ


Share It

You cannot copy content of this page