ಬೆಂಗಳೂರು: ಬಿಜೆಪಿಗೆ ಜೀವ ಇರುವುದೇ ಕಾರ್ಯಕರ್ತರಲ್ಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕಾಂಗ್ರೆಸ್‌ನವರಿಗೆ ಸದಸ್ಯರು ಎಷ್ಟಿದ್ದಾರೆ ಎಂಬುದು ಮುಖ್ಯ ಅಲ್ಲ, ಕುಟುಂಬ ಇದೆಯೋ ಇಲ್ಲವೋ ಎನ್ನುವುದೇ ಮುಖ್ಯ. ರಾಹುಲ್ ಗಾಂಧಿ ದೇಶ ಬಿಟ್ಟು ಹೋದರೆ ಏನು ಕಥೆ. ಅವರದ್ದು ಲೀಡರ್ ಬೇಸ್ ಪಕ್ಷ. ಕಾಂಗ್ರೆಸ್‌ನವರು 1 ರೂ. ನೀಡಿ ಸದಸ್ಯತ್ವ ಮಾಡಿಕೊಳ್ಳುತ್ತಿದ್ದರು. ಹೆಚ್ಚು ಸದಸ್ಯತ್ವ ಆಗಿದೆ ಎಂದು ತೋರಿಸಲು ಈ ತರಹ ಮಾಡುತ್ತಿದ್ದರು ಎಂದು ಹೇಳಿದರು.
ಕಾರ್ಯಕರ್ತರೇ ಪಕ್ಷದ ಬುನಾದಿ. ದೇಶದ ಹಿತಕ್ಕಾಗಿ ಕೆಲಸ ಮಾಡುವ ಪಕ್ಷ ಬಿಜೆಪಿ. ಕಾಂಗ್ರೆಸ್ ಒಂದು ಕುಟುಂಬಕ್ಕೆ ಮೀಸಲಾದ ಪಕ್ಷ. ಕುಟುಂಬ ಮೊದಲು, ಪಕ್ಷ ನಂತರ, ದೇಶ ಕೊನೆಗೆ ಇದು ಕಾಂಗ್ರೆಸ್ ನೀತಿ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಹೇಳಿದರು.
ಬಿ.ವೈ. ವಿಜಯೇಂದ್ರ ಅವರು ಅಧ್ಯಕ್ಷರಾದ ಮೇಲೆ ಪಕ್ಷಕ್ಕೆ ನವಚೈತನ್ಯ ಸಿಕ್ಕಿದೆ. ಯಾವ ರಾಜ್ಯದಲ್ಲಿ ಬಿಜೆಪಿ ಲೆಕ್ಕಕ್ಕೇ ಇಲ್ಲದ ಪಕ್ಷವಾಗಿತ್ತು, ಅಲ್ಲಿ ಪ್ರಾಬಲ್ಯ ಪಡೆಯುತ್ತಿದ್ದೇವೆ. ಮೇಲು ಕೀಳು ಎಂಬ ಭೇದಭಾವ ಇಲ್ಲದೇ ಕೆಲಸ ಮಾಡಬೇಕಿದೆ. ಮನೆ ಮನೆಗೆ ಹೋಗಿ ಸದಸ್ಯತ್ವ ಅಭಿಯಾನ ಮಾಡೋಣ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್, ಸಂಸದರಾದ ಪಿ.ಸಿ. ಮೋಹನ್, ಗೋವಿಂದ ಕಾರಜೋಳ , ಶಾಸಕ ಡಾ. ಅಶ್ವಥ್ ನಾರಾಯಣ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮತ್ತು ಬಿಜೆಪಿ ರಾಜ್ಯ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಉಪಸ್ಥಿತರಿದ್ದರು.