ರಾಜಕೀಯ ಸುದ್ದಿ

ಮುಡಾ ಹಗರಣ: ಸಿದ್ದರಾಮಯ್ಯ ಪಾತ್ರದ ಬಗ್ಗೆ ದಾಖಲೆ ಬಿಡುಗಡೆಗೊಳಿಸಿದ ಎಚ್.ಡಿ.ಕೆ!

Share It

ಬೆಂಗಳೂರು: ಮೂಡಾ ಹಗರಣದಲ್ಲಿ ತಮ್ಮ ಹಾಗೂ ತಮ್ಮ ಕುಟುಂಬದ ಪಾತ್ರವೇ ಇಲ್ಲ ಎಂದು ಹೇಳುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ದಾಖಲೆ ಸಮೇತವೇ ಉತ್ತರ ನೀಡಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು; ಮಾರುಕಟ್ಟೆ ದರದಲ್ಲಿ ಜಮೀನಿನ ಪರಿಹಾರ ಅಥವಾ 40:60ರ ಅನುಪಾತದಲ್ಲಿ ನಿವೇಶನ ನೀಡುವ ಮೂಡಾ ಪ್ರಸ್ತಾವನೆ ನಿರಾಕರಿಸಿ ಬದಲಿ ಜಮೀನನ್ನೇ ನೀಡುವಂತೆ ಒತ್ತಾಯ ಮಾಡಿರುವ ದಾಖಲೆಯನ್ನು ಕೇಂದ್ರ ಸಚಿವರು ಬಿಡುಗಡೆ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ, ಮೂಡಾ ನಿವೇಶನ ಹಂಚಿಕೆಯಲ್ಲಿ ನನ್ನ ಹಾಗೂ ಕುಟುಂಬದ ಪಾತ್ರವೇ ಇಲ್ಲ ಎಂದು ಬೊಗಳೆ ಬಿಡುವ ನಿಮಗೆ ಕನ್ನಡ ಬರುತ್ತದೆ, ಭಾಷೆ ಗೊತ್ತಿದೆ ಎಂದು ನಾನಾದರೂ ಪರಿಭಾವಿಸುತ್ತೇನೆ. ನೀವು ಸ್ವಯಂಘೋಷಿತ ವಕೀಲರಲ್ಲವೇ? ದಾಖಲೆಯನ್ನೊಮ್ಮೆ ಕಣ್ಣಲ್ಲಿ ಕಣ್ಣಿಟ್ಟು ಓದಿ ಎಂದು ದಾಖಲೆಯನ್ನು ಎಕ್ಸ್ ಖಾತೆಯಲ್ಲಿ ಟ್ಯಾಗ್ ಮಾಡಿದ್ದಾರೆ.

“50:50ರ ಅನುಪಾತದಲ್ಲಿಯೇ ಮೂಡಾ ಬದಲಿ ನಿವೇಶನ ನೀಡಲೇಬೇಕು ಎಂದು ಸಿಎಂ ಸಾಹೇಬರ ಧರ್ಮಪತ್ನಿ ಒತ್ತಾಯ ಮಾಡಿದ್ದಾರೆ ಹಾಗೂ ಅರ್ಜಿದಾರರಾದ ಪಾರ್ವತಮ್ಮ ಇವರಿಗೆ ಮಾರುಕಟ್ಟೆ ದರದಲ್ಲಿ ಜಮೀನಿನ ಪರಿಹಾರ ನೀಡುವುದಾಗಿಯೂ ಅಥವಾ 40:60ರ ಅನುಪಾತದಲ್ಲಿ ನಿವೇಶನ ನೀಡುವುದಾಗಿಯೂ ಮುಡಾ ತಿಳಿಸಿತ್ತು.

ಆದರೆ, ಪ್ರಾಧಿಕಾರದ ಈ ಸಲಹೆಗೆ ಅವರು ಒಪ್ಪಿಗೆ ನೀಡದೇ ಇದ್ದು, ಬದಲಿ ಜಮೀನನ್ನು ನೀಡುವಂತೆ ಒತ್ತಾಯಿಸಿರುತ್ತಾರೆ. ಇದು ಮೂಡಾ ದಾಖಲೆಯ ಒಕ್ಕಣೆ. ಇದಕ್ಕೆ ತಾವು ಏನಂತೀರಿ? ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇದು ತಮ್ಮ ಪ್ರಕಾರ ಟಿಪ್ಪಣಿಯೋ? ಒಕ್ಕಣೆಯೋ? ಅಥವಾ ಅಪ್ಪಣೆಯೋ? ಸೂಪರ್ ಸಿಎಂ ಅವರೇ ‘ಒತ್ತಾಯಿಸಿರುತ್ತಾರೆ! ಎಂದರೆ ಮೂಡಾ ಅಧಿಕಾರಿಗಳು ಇನ್ನೇನು ಮಾಡಿಯಾರು? ಆಗ ತಾವು ರಾಜ್ಯದಲ್ಲಿ ಏನಾಗಿದ್ದಿರಿ? ವಿಧಾನಸೌಧದ 3ನೇ ಮಹಡಿಯಲ್ಲಿರುವ ಸಿಎಂ ಕುರ್ಚಿಯಲ್ಲಿ ಕೂತಿದ್ದಿರಿ. ಈಗ ಹೇಳಿ, ಯಾರ ತಟ್ಟೆಯಲ್ಲಿ ಏನು ಸತ್ತು ಬಿದ್ದಿದೆ? ಅಥವಾ ಕಪ್ಪುಚುಕ್ಕೆಯನ್ನು ವೈಟ್ನರ್ ನುಂಗಿತ್ತಾ? ಎಂದು ಅವರು ಸಿಎಂಗೆ ತಿರುಗೇಟು ನೀಡಿದ್ದಾರೆ.

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯ ಹೆಚ್ಚಾಗುತ್ತಿದೆ. ಆದರೆ ಗುರುವಾರ ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಪರವಾಗಿ ಶಾಸಕರು ಬೆಂಬಲ ಸೂಚಿಸಿದ್ದರು. ಇದರಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಏನೂ ಇಲ್ಲ, ರಾಜಕೀಯವಾಗಿ ಆರೋಪ ಮಾಡಲಾಗ್ತಿದೆ ಎಂಬುವುದು ಅವರ ಬೆಂಬಲಿಗರ ವಾದವಾಗಿದೆ.

ಗುರುವಾರ ಬಿಜೆಪಿ ರಾಜ್ಯಾದ್ಯಂತ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ನಡೆಸಿತ್ತು. ಹಗರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿತ್ತು. ಆದರೆ ಕಾಂಗ್ರೆಸ್, ಪ್ರಕರಣದಲ್ಲಿ ರಾಜ್ಯಪಾಲರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸುತ್ತಿದೆ.

ಬೆಳವಣಿಗೆಗಳ ನಡುವೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕೆ ಸೇರಿ ನಾಲ್ವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಬೇಕು ಎಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರಿಗೆ ಸಲಹೆ ನೀಡಲಾಗಿದೆ.


Share It

You cannot copy content of this page