ಉಪಯುಕ್ತ ಸುದ್ದಿ

ಬೆಳಗಾವಿ ಹಾಗೂ ಕಲಬುರಗಿ ವಿಭಾಗದಲ್ಲಿ ತಾಪಮಾನ ಹೆಚ್ಚಳ: ನರೇಗಾ ಕಾರ್ಮಿಕರಿಗೆ ಶೇ.30 ಕೆಲಸದ ಪ್ರಮಾಣ ಕಡಿತ

Share It

ಬೆಂಗಳೂರು: ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ವಾಡಿಕೆಗಿಂತ ಹೆಚ್ಚು ತಾಪಮಾನ ಏರಿಕೆಯಾಗಿದ್ದು, ಹೆಚ್ಚಿನ ಬಿಸಿಲು ಇರುವ ಕಾರಣ, ಗ್ರಾಮೀಣ ಭಾಗದ ಜೀವನೋಪಾಯದ ಪ್ರಮುಖ ಭಾಗವಾದ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಬೆಳಗಾವಿ ಮತ್ತು ಕಲಬುರಗಿ ಕಂದಾಯ ವಿಭಾಗದ ಕಾರ್ಮಿಕರಿಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶೇ.30 ರಷ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ಘೋಷಿಸಿರುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೇಸಿಗೆ ದಿನಗಳಲ್ಲಿ ಕೂಲಿ ಕಾರ್ಮಿಕರು  ಶಾಖಾಘಾತದಿಂದ, ತಮ್ಮ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳನ್ನು ತಪ್ಪಿಸಲು ಬಿಳಿಯ ಬಣ್ಣದ ಸಡಿಲವಾದ ಖಾದಿ ಬಟ್ಟೆಗಳನ್ನು ಹಾಗೂ ತಲೆಯ ಮೇಲೆ ಬಿಳಿ ಬಣ್ಣದ ರುಮಾಲು ಧರಿಸಿ ಕೆಲಸ ಮಾಡಬೇಕು, ಚಹಾ, ಕಾಫಿ , ತಂಪಾದ ಪಾನೀಯಗಳು, ಮಸಾಲೆ ಮತ್ತು ಎಣ್ಣೆಭರಿತ ಆಹಾರದ ಬದಲಾಗಿ ಹೆಚ್ಚು ತೇವಾಂಶವುಳ್ಳ ತರಕಾರಿ, ಅಂಬಲಿ, ಮಜ್ಜಿಗೆ, ಎಳೆನೀರು ಸೇವನೆ ಮಾಡಬೇಕು ಹಾಗೂ ನೀರನ್ನು ಯಥೇಚ್ಛವಾಗಿ ಕುಡಿಯಬೇಕು ಎಂದು ಸಚಿವರು ಸಲಹೆ ಮಾಡಿದ್ದಾರೆ.

ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿ ಸ್ಥಳಗಳಲ್ಲಿ ಯೋಜನೆಯ ಮಾರ್ಗಸೂಚಿಯಂತೆ ಕಡ್ಡಾಯವಾಗಿ ನೆರಳು, ಶುದ್ಧ ಕುಡಿಯುವ ನೀರು, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮವಹಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದ್ದಾರೆ.


Share It

You cannot copy content of this page