ಬೆಂಗಳೂರು: ರಾಜ್ಯದ 2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಲು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದು ಬೆಳಗ್ಗೆ 11:30 ರ ಸುಮಾರಿಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪ್ರೌಢ ಶಿಕ್ಷಣ ಶಾಲಾ ಪರೀಕ್ಷಾ ಮಂಡಳಿ ಮತ್ತು ಮೌಲ್ಯಮಾಪನಾ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಒಟ್ಟಾರೆ ಈ ಬಾರಿಯ 2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.66.14 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಳೆದ ಬಾರಿಗೆ ಹೋಲಿಸಿದರೆ ರಾಜ್ಯದಲ್ಲಿ ಈ ಬಾರಿ ಶೇಕಡಾ 8 ರಷ್ಟು ಹೆಚ್ಚಿನ ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ರಾಜ್ಯದಲ್ಲಿ ಒಟ್ಟು 8.96 ಲಕ್ಷಕ್ಕೂ ಅಧಿಕ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 4,61563 ವಿದ್ಯಾರ್ಥಿಗಳು ಮತ್ತು 4,34,884 ವಿದ್ಯಾರ್ಥಿನಿಯರು 240 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆದಿದ್ದರು. ಮೌಲ್ಯಮಾಪನದಲ್ಲಿ ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯು 240 ಮೌಲ್ಯಮಾಪನ ಕೇಂದ್ರಗಳಲ್ಲಿ 65,000 ಮೌಲ್ಯಮಾಪಕರಿಂದ ನಡೆದಿತ್ತು.
ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಕ್ರಮವಾಗಿ 1ನೇ, 2ನೇ, 3ನೇ ಸ್ಥಾನ ಪಡೆದಿವೆ. ಶಿವಮೊಗ್ಗ, ಕೊಡಗು, ಹಾಸನ ನಂತರದ ಸ್ಥಾನಗಳನ್ನು ಪಡೆದಿವೆ. ಈ ಬಾರಿ ರಾಜ್ಯದ 22 ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆಯ 625 ಅಂಕಗಳಲ್ಲಿ 625 ಅಂಕಗಳನ್ನು ಪಡೆದು ರ್ಯಾಂಕ್ ಪಡೆದಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.