ಆರೋಗ್ಯ ಸುದ್ದಿ

ಅಂಬ್ಯುಲೆನ್ಸ್ ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ತಾಯಿ: ನರ್ಸ್ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ

Share It


ಚಿಕ್ಕಬಳ್ಳಾಪುರ: ಆಸ್ಪತ್ರೆಗೆ ಸಾಗುವ ದಾರಿಯಲ್ಲಿ ಅಂಬ್ಯುಲೆನ್ಸ್ ನಲ್ಲೇ ಗರ್ಭಿಣಿಯೊಬ್ಬರು ಸುರಕ್ಷತೆಯ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನಲ್ಲಿ ನಡೆದಿದೆ.

ದೊಡ್ಡನಂಚೇರ್ಲು ಗ್ರಾಮದಿಂದ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ಸಾಗಿಸಬೇಕು ಎಂಬ ಕರೆ ಅಂಬ್ಯುಲೆನ್ಸ್ ಗೆ ಬಂದಿತ್ತು. ಅಂಬ್ಯುಲೆನ್ಸ್ ಸಿಬ್ಬಂದಿ ನರ್ಸ್ ಶೃತಿ ಮತ್ತು ಚಾಲಕ ಮಾರುತಿ ಕರೆಗೆ ಸ್ಪಂದಿಸಿ ಗ್ರಾಮಕ್ಕೆ ಆಗಮಿಸಿ, ಗರ್ಭಿಣಿಯನ್ನು ಆಸ್ಪತ್ರೆಗೆ ಕರೆಯೊಯ್ಯುತ್ತಿದ್ದರು.

ಗ್ರಾಮೀಣ ಭಾಗದ ರಸ್ತೆಯಲ್ಲಿ ಸಾಗುತ್ತಿದ್ದಾಗಲೇ ಹೆರಿಗೆ ನೋವು ಹೆಚ್ಚಾಗಿದ್ದು, ನರ್ಸ್ ಶೃತಿ ತಕ್ಷಣಕ್ಕೆ ಕಾರ್ಯಪ್ರವೃತ್ತರಾಗಿ ಹೆರಿಗೆ ಮಾಡಿಸಿದ್ದಾರೆ. ಗಂಡು ಮಗು ಸುರಕ್ಷಿತವಾಗಿ ಜನಿಸಿದ್ದು, ಅನಂತರ ಮಗು ಮತ್ತು ತಾಯಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಮಗು ಎರಡು ಕೆ.ಜಿ. ತೂಕವಿದ್ದು, ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಸಮಯಕ್ಕೆ ಸರಿಯಾಗಿ ತಮ್ಮ ಕರೆಗೆ ಸ್ಪಂದಿಸಿದ ಅಂಬ್ಯುಲೆನ್ಸ್ ಚಾಲಕ ಮತ್ತು ಹೆರಿಗೆ ಮಾಡಿಸಿ ತಮ್ಮ ಮಗಳು ಮತ್ತು ಮಗುವಿನ ಸುರಕ್ಷಿತ ಹೆರಿಗೆ ಮಾಡಿಸಿದ ನರ್ಸ್ ಶೃತಿಯವರಿಗೆ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.


Share It

You cannot copy content of this page