ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ದ ಅತ್ಯಾಚಾರ ಪ್ರಕರಣದ ದಾಖಲಿಸಿರುವ ಸಂತ್ರಸ್ತೆಯ ಮನೆಗೆ ಮುನಿರತ್ನ ಬೆಂಬಲಿಗರು ಮತ್ತು ಬಿಜೆಪಿ ನಾಯಕರು ನುಗ್ಗಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಘಟನೆಗೆ ಸಂಬಂದಿಸಿದಂತೆ ಅತ್ಯಾಚಾರ ಸಂತ್ರಸ್ತೆಯ ಪುತ್ರ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತೆ ಸುನಂದಮ್ಮ ಹಾಗೂ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಮುನಿರತ್ನ ಬಂಧನವಾಗಿ ಪರಪ್ಪನ ಅಗ್ರಹಾರ ಜೈಲು ಸೇರುತ್ತಿದ್ದಂತೆ ಸಂತ್ರಸ್ತೆಯ ಮನೆಗೆ ನುಗ್ಗಿದ ಸುನಂದಮ್ಮ ಮತ್ತು ಮಹನಿರತ್ನ ಬೆಂಬಲಿಗರು ದೂರು ವಾಪಸ್ ಪಡೆಯುವಂತೆ ಧಮಕಿ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
‘ನಮ್ಮ ಶಾಸಕರ ವಿರುದ್ಧ ನೀಡಿರುವ ದೂರು ವಾಪಸ್ ಪಡೆದರೆ ಸರಿ ಇಲ್ಲವಾದಲ್ಲಿ ನಿಮ್ಮನ್ನೂ ನಿಮ್ಮ ಕುಟುಂಬವನ್ನು ಉಳಿಸುವುದಿಲ್ಲ’ ಎಂದು ಸುನಂದಮ್ಮ ಮತ್ತು ಅವರ ಸಂಗಡಿಗರು ಗುಡುಗಿದ್ದಾರೆ. ಮನೆಯ ಕಿಟಕಿ ಮತ್ತು ಕೆಲ ವಸ್ತುಗಳಿಗೆ ಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮುನಿರತ್ನ ಮತ್ತು ಏಳು ಜನರ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ನಡೆಸಿ, ಪ್ರಾಣಬೆದರಿಕೆ ಹಾಕಿ, ಬಲವಂತವಾಗಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿರುವ ಕುರಿತು ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದೀಗ ಮುನಿರತ್ನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಮತ್ತು ಬಿಜೆಪಿ ಮುಖಂಡರು ಕ್ಷೇತ್ರದಲ್ಲಿ ದೂರು ನೀಡಿದ ವ್ಯಕ್ತಿಗಳು ಮತ್ತು ಸಕ್ಷಿದಾರರನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ‘ಅಣ್ಣ ಹೊರಗೆ ಬರಲಿ, ನಿಮಗೆಲ್ಲ ಒಂದು ಗತಿ ಕಾಣಿಸ್ತೇವೆ’ ಎಂದು ಕರೆಯುತ್ತಾರೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ.