ಬೆಂಗಳೂರು: ಹತ್ತು ವರ್ಷದಿಂದ ಧೂಳು ಹಿಡಿದಿದ್ದ ಜಾತಿ ಸಮೀಕ್ಷೆಗೆ ಜಾರಿಭಾಗ್ಯ ಸಿಕ್ಕಿದಾಗ ಅದನ್ನು ವಿರೋಧಿಸಿ, ಘರ್ಜಿಸಿದ್ದ ಬಿಜೆಪಿ ನಾಯಕರಿಗೆ ಇದೀಗ ದಿಢೀರ್ ಜೋಲು ಮೋರೆಯ ಭಾಗ್ಯ ಕೊಟ್ಟಿದ್ದಾರೆ ಪ್ರಧಾನಿ ನರೇಂದ್ರ ಮೋದಿ.
ಕರ್ನಾಟಕ ಸರಕಾರ ಜಾತಿ ಸಮೀಕ್ಷೆ ಬಿಡುಗಡೆ ಮಾಡಿ, ಸಂಪುಟ ಸಭೆಯ ಮುಂದಿಟ್ಟು ಚರ್ಚೆಗೆ ಮುಂದಾದ ಬೆನ್ನಲ್ಲೇ ಜಾತಿಗಣತಿಯನ್ನು ಟೀಕಿಸಿ, ಜಾತಿ ಗಣತಿಗೆ ನಮ್ಮ ಮನೆಯ ಹತ್ತಿರ ಯಾರೂ ಬಂದೇ ಇಲ್ಲ, ಜಾತಿಗಣತಿ ಮೂಲಕ ಹಿಂದೂಗಳಲ್ಲಿ ಬಿರುಕು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಸರಕಾರವನ್ನು ಟೀಕೆ ಮಾಡಿದ್ದ ಬಿಜೆಪಿ ನಾಯಕರಿಗೆ ಕೇಂದ್ರ ಸರಕಾರ ಜಾತಿಗಣತಿಯ ಶಾಕ್ ನೀಡಿದೆ.
ಇದೀಗ ಕೇಂದ್ರ ಸರಕಾರವೇ ಜಾತಿಗಣತಿ ಮಾಡಲು ತೀರ್ಮಾನಿಸಿದ್ದು, ದೇಶಾದ್ಯಂತ ಜಾತಿಗಣತಿ ನಡೆಸಲು ಮುಂದಾಗಿದೆ. ಇಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಂಡಿದ್ದು, ಈ ವಿಷಯವನ್ನು ಸಚಿವ ಅಶ್ವಿನ್ ವೈಷ್ಣವ್ ತಿಳಿಸಿದ್ದಾರೆ. ಜತೆಗೆ ಕಾಂಗ್ರೆಸ್ ಸರಕಾರ ಜಾತಿ ಗಣತಿ ಮೇಲೆ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯದಲ್ಲಿ ಜಾತಿಗಣತಿ ಮೂಲಕ ರಾಜಕೀಯ ಮಾಡುತ್ತಿದೆ ಎಂದಿದ್ದಾರೆ. ಜತೆಗೆ, ಸಂವಿಧಾನದ ಪ್ರಕಾರ ಜಾತಿಗಣತಿ ಮಾಡುವುದು ಕೇಂದ್ರದ ಹೊಣೆಗಾರಿಕೆ ಎಂದು ಇದೀಗ ಅವರಿಗೆ ಎಚ್ಚರವಾಗಿದೆ.
ಕರ್ನಾಟಕ ಸರಕಾರ 2016-17 ರಲ್ಲಿಯೇ ಜಾತಿಗಣತಿ ಆರಂಭಿಸಿತ್ತು. ಅನಂತರ ಮೈತ್ರಿ ಸರಕಾರದಲ್ಲಿ ಒಕ್ಕಲಿಗ, ಲಿಂಗಾಯತ ನಾಯಕರ ಒತ್ತಡಕ್ಕೆ ಮಣಿದು ಕುಮಾರಸ್ವಾಮಿ ಅದನ್ನು ಬದಿಗಿಟ್ಟಿದ್ದರು. ನಂತರ ಬಿಜೆಪಿ ಅಧಿಕಾರಕ್ಕೆ ಬಂತಾದರೂ, ಅದನ್ನು ಮುಟ್ಟಿ ನೋಡಲಿಲ್ಲ. ಇದೀಗ ಸಿದ್ದರಾಮಯ್ಯ ಮತ್ತೇ ಅಧಿಕಾರಕ್ಕೆ ಬಂದ ಮೇಲೆ ಜಾತಿಸಮೀಕ್ಷೆಗೆ ಮರುಜೀವ ಬಂದಿದ್ದು, ಇದೀಗ ವರದಿ ಪಡೆದು ಚರ್ಚೆಗೆ ಹಚ್ಚಿದ್ದಾರೆ. ಈ ಎಲ್ಲ ಬೆಳವಣಿಗೆಯಲ್ಲಿ ಜಾತಿಗಣತಿಯ ವಿರುದ್ಧ ಮಾತನಾಡುತ್ತಿದ್ದ ಬಿಜೆಪಿ ನಾಯಕರು ಮತ್ತು ಬೆಂಬಲಿಗರು ಇದೀಗ ಕೈ ಹಿಸುಕಿಕೊಳ್ಳಬೇಕಾಗಿದೆ.
ಜಾತಿ ಗಣತಿ ಧರ್ಮ ಹೊಡೆಯುವ ಹುನ್ನಾರ ಎಂದು ಹೇಳುತ್ತಿದ್ದ ಬಿಜೆಪಿ ನಾಯಕರಿಗೆ ಕೇಂದ್ರದಲ್ಲಿ ತಮ್ಮದೇ ಪಕ್ಷದ ಸರಕಾರ ಜಾತಿಗಣತಿ ಮಾಡಲು ಹೊರಟಿರುವುದನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಹಾಗಂತ ಮೋದಿ ವಿರುದ್ಧ ಮಾತನಾಡಿವ ಎದೆಗಾರಿಕೆಯೂ ಯಾರಿಗೂ ಇಲ್ಲ. ಹೀಗಾಗಿ, ತಾವೇ ಆಡಿದ್ದ ಮಾತು ಮರೆತು, ಇದೀಗ ಕೇಂದ್ರದ ತೀರ್ಮಾನವನ್ನು ಹೊಗಳಿ, ಮಾತನ್ನಾಡುತ್ತಿದ್ದಾರೆ. ಕಾಂಗ್ರೆಸ್ ಜಾತಿಗಣತಿ ಸರಿಯಾಗಿ ಮಾಡಿರಲಿಲ್ಲ. ನಾವು ಸರಿಯಾಗಿ ಲೆಕ್ಕಾ ಹಾಕ್ತೀವಿ ಎಂದು ತಿಪ್ಪೆ ಸಾರಿಸುತ್ತಿದ್ದಾರೆ.
ಒಟ್ಟಾರೆ, ಜಾತಿಗಣತಿ ಬಿಡುಗಡೆ ಮಾಡಿ ಬಿಜೆಪಿಗೆ ನಡುಕ ಹುಟ್ಟಿಸಿದ್ದ ಕಾಂಗ್ರೆಸ್, ಇದೀಗ ಕೇಂದ್ರ ಸರಕಾರವೂ ಜಾತಿಗಣತಿಗೆ ಮುಂದಾಗುವಂತೆ ಮಾಡಿದೆ. ಮತ್ತೊಮ್ಮೆ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿದೆ. ಜಾತಿ ಸಮೀಕರಣ ಬಿಜೆಪಿಯ ಕೋಮು ರಾಜಕಾರಣಕ್ಕೆ ಹಿನ್ನಡೆ ತರುವ ಅಂಶ ಎಂಬುದು ಅವರಿಗೆ ಹರಗಿಸಿಕೊಳ್ಳಲಾಗದ ಸತ್ಯವಾಗಿದ್ದು, ಗಾಯದ ಮೇಲೆ ಬರೆ ಎಂಬಂತೆ ಕೇಂದ್ರವೂ ಜಾತಿಸಮೀಕ್ಷೆಗೆ ತೀರ್ಮಾನಿಸಿರುವುದು, ರಾಜ್ಯ ಬಿಜೆಪಿ ನಾಯಕರ ಗಂಟಲು ಕಟ್ಟಿಹಾಕಿದೆ.
ಜಾತಿಯನ್ನು ಹಾಸಿಹೊದ್ದಿರುವ ಭಾರತದಲ್ಲಿ ಈವರೆಗೆ ಒಂದೇ ಒಂದು ಸರಕಾರಿ ಕೆಲಸ ಪಡೆಯದ ಅದೆಷ್ಟೋ ಜಾತಿಗಳಿವೆ. ಸಂವಿಧಾನಾತ್ಮಕ ಸೌಲಭ್ಯಗಳೇ ಸಿಗದ ಅದೆಷ್ಟೋ ಬುಡಕಟ್ಟು ಸಮುದಾಯಗಳಿವೆ. ಬಲಿಷ್ಠ ಸಮುದಾಯವಿದ್ದರೂ ರಾಜಕೀಯ ಪ್ರಾತಿನಿಧ್ಯತೆ ಸಿಗದೆ, ವಂಚಿತವಾದ ಜಾತಿಗಳಿವೆ. ಹೀಗಾಗಿ, ಜಾತಿ ಸಮೀಕ್ಷೆ ಸಣ್ಣ ಸಣ್ಣ ಸಮುದಾಯಗಳ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಏಳಿಗೆಗೆ ಅಸ್ತ್ರವಾಗಲಿದೆ ಎಂಬುದು ಕಾಂಗ್ರೆಸ್ ಧ್ಯೇಯವಾಗಿತ್ತು. ಇದೀಗ ಅದರ ಜಾಡನ್ನೇ ಹಿಡಿದು ಹೊರಟಿರುವ ಬಿಜೆಪಿ ಜಾತಿಗಣತಿಯ ಅಸ್ತ್ರ ಹಿಡಿದು ಹೊರಟಿದೆ. ಇದರ ಲಾಭ ಯಾರಿಗೆ ಎಂಬುದನ್ನು ಕಾದು ನೋಡಬೇಕಷ್ಟೇ !