ಬಳ್ಳಾರಿ: ನೂರಾರು ಕಾರುಗಳನ್ನು ಬಾಡಿಗೆ ಪಡೆದು ಸಿನಿಮೀಯ ರೀತಿಯಲ್ಲಿ ವಂಚನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿಂಚಿನ ಕಾರ್ಯಾಚರಣೆ ನಡೆಸಿದ ಬಳ್ಳಾರಿ ಪೊಲೀಸರು ಬರೋಬ್ಬರಿ ೪೬ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ.
ರಾಯಚೂರು ಜಿಲ್ಲೆ ಸಿಂಧನೂರು ಮೂಲದ ಜಾಹೀದ್ ಅಲಿಯಾಸ್ ಸೋನು ವಂಚನೆ ಮಾಡಿದ್ದು ಈಗ ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ತಿಂಗಳಿಗೆ 50-60 ಸಾವಿರ ರೂ. ಬಾಡಿಗೆ ನೀಡುವುದಾಗಿದ್ದ ಹೇಳಿ ಜಾಹಿದ್ ಕಾರುಗಳನ್ನು ಬಾಡಿಗೆ ಪಡೆದು ಹಲವೆಡೆ ಮಾರಾಟ ಮಾಡಿದ್ದ. ಆ ಬಳಿಕ ಬ್ರಾಂಡೆಡ್ ಕಾರುಗಳನ್ನು 4-10 ಲಕ್ಷದವರೆಗೂ ಮಾರಾಟ ಮಾಡಿ ಬಂದ ಹಣದಲ್ಲಿ ಮಜಾ ಮಾಡುತ್ತಿದ್ದ.
ಆರಂಭದಲ್ಲಿ ಕಾರುಗಳ ಮಾಲೀಕರಿಗೆ ಒಂದು ತಿಂಗಳು ಬಾಡಿಗೆ ಕೊಟ್ಟು ನಂತರ ಜಾಹೀದ್ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಜಿಪಿಎಸ್ ಟ್ರ್ಯಾಕ್ ಮಾಡಿದಾಗ ಕಾರು ಮಾರಾಟ ಮಾಡಿದ್ದು ಬೆಳಕಿಗೆ ಬಂದಿತ್ತು. ಘಟನೆಗೆ ಸಂಬಂಧಿಸಿ ಬಳ್ಳಾರಿಯ ಹಲವು ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿತ್ತು. ತನಿಖೆಗೆ ಇಳಿದಾಗ ಜಹೀದ್ 107 ಕಾರುಗಳ ಮಾಲೀಕರಿಗೆ ವಂಚನೆ ಮಾಡಿದ್ದು ಬೆಳಕಿಗೆ ಬಂದಿತ್ತು.
ತನಿಖೆ ಚುರುಕುಗೊಳಿಸಿ ಕಾರುಗಳನ್ನು ಪತ್ತೆ ಮಾಡಿರುವ ಪೊಲೀಸರು ಮಾಲೀಕರಿಗೆ ಕಾರುಗಳನ್ನು ಹಿಂತಿರುಗಿಸಿದ್ದಾರೆ. ಆರೋಪಿ ಜಹೀದ್ 700ಕ್ಕೂ ಹೆಚ್ಚು ಕಾರುಗಳನ್ನ ಬಾಡಿಗೆ ಪಡೆದು ಮಾರಾಟ ಮಾಡಿರುವ ಶಂಕೆ ಇದೆ.