ಹಾಸನ: ಹಾಸನದಲ್ಲಿ ಸಾವನ್ನಪ್ಪಿದ್ದ KSRTC ಚೆಕ್ಕಿಂಗ್ ಇನ್ಸ್ ಪೆಕ್ಟರ್ ಸಾವಿಗೆ ಟ್ವಿಸ್ಟ್ ಸಿಕ್ಕಿದ್ದು, ಅಕ್ರಮ ಅಕ್ಕಿ ಸಾಗಾಟ ವಾಹನವೇ ಅವರ ಸಾವಿಗೆ ಕಾರಣ ಎನ್ನಲಾಗಿದೆ.
ಶುಕ್ರವಾರ ಬೆಳಗ್ಗೆ ನಡೆದ ಅಪಘಾತದಲ್ಲಿ ಹೊಳೆನರಸೀಪುರ ಡಿಪೋದ ಚೆಕ್ಕಿಂಗ್ ಇನ್ಸ್ ಪೆಕ್ಟರ್ ಶಕುನಿಗೌಡ ಸಾವನ್ನಪ್ಪಿದ್ದರು. ಮಂಗಳೂರು ಕಡೆಯಿಂದ ವೇಗವಾಗಿ ಬಂದ ಲಾರಿಯೊಂದು ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದ.
ವಿಚಾರಣೆ ವೇಳೆ ಲಾರಿಯಲ್ಲಿ ಅಕ್ಕಿ ಚೀಲಗಳು ಕಂಡುಬಂದಿದ್ದು, ವಿಚಾರಣೆ ನಡೆಸಿದಾಗ ಪಡಿತರ ಕಳ್ಳಸಾಗಾಣೆ ಮಾಡಿಕೊಂಡು ವೇಗವಾಗಿ ಬಂದ ಲಾರಿ ಚಾಲಕ, ಖಾಕಿ ಡ್ರೆಸ್ ನಲ್ಲಿಸ್ದ ಅಧಿಕಾರಿಯನ್ನು ಕಂಡು ಗಾಬರಿಯಾಗಿ ವೇಗವಾಗಿ ಚಾಲನೆ ಮಾಡಿ, ಅವರ ಮೇಲೆ ಲಾರಿ ಹರಿಸಿದ್ದಾನೆ ಎಂಬ ಅನುಮಾನ ಮೂಡಿದೆ.
ಪ್ರಕರಣ ತಿರುವು ಪಡೆದ ಬೆನ್ನಲ್ಲೇ ಪೊಲೀಸರು, ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಕ್ರಮ ಪಡಿತರ ಸಾಗಾಟಕ್ಕೆ ಅಮಾಯಕ ಕೆ.ಆರ್. ಆರ್.ಟಿಸಿ ಸಿಬ್ಬಂದಿಯೊಬ್ಬರು ಬಲಿಯಾಗಿದ್ದಾರೆ.
