ಬೆಂಗಳೂರು: ಬಿಬಿಎಂಪಿ ಕಲ್ಯಾಣ ಕಾರ್ಯಕ್ರಮದಲ್ಲಿ ನಡೆದಿರುವ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇಬ್ಬರು ಬಿಬಿಎಂಪಿ ಅಧಿಕಾರಿಗಳ ನಿವಾಸಗಳ ಮೇಲೆ ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಿಬಿಎಂಪಿ ಕಲ್ಯಾಣಾಧಿಕಾರಿ ಲಲಿತಾ ಹಾಗೂ ಉಪ ಹಣಕಾಸು ನಿಯಂತ್ರಕ ಸತ್ಯಮೂರ್ತಿ ಅವರ ನಿವಾಸಗಳಿಗೆ ಲೋಕಾಯುಕ್ತ ಡಿವೈಎಸ್‌ಪಿ ಸುನೀಲ್.ವೈ.ನಾಯಕ್ ನೇತೃತ್ವದಲ್ಲಿ 8 ತಂಡಗಳಾಗಿ ದಾಳಿ ನಡೆಸಿದ್ದು, ಶೋಧ ಮುಂದುವರೆದಿದೆ.
ಬಿಬಿಎಂಪಿಯ ಪಶ್ಚಿಮ ವಲಯದಲ್ಲಿ ಕಲ್ಯಾಣ ಯೋಜನೆಗಳ ಅನುಷ್ಠಾನದ ಹೆಸರಿನಲ್ಲಿ ಫಲಾನುಭವಿಗಳ ಹಣವನ್ನು ಅಕ್ರಮವಾಗಿ ಸೊಸೈಟಿಗಳಿಗೆ ವರ್ಗಾಯಿಸಿಕೊಂಡು ಕಬಳಿಸಿರುವ ಆರೋಪ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ವಯ್ಯಾಲಿಕಾವಲ್‌ನಲ್ಲಿರುವ ಸತ್ಯಮೂರ್ತಿ ಅವರ ಮನೆ ಹಾಗೂ ದೇವಯ್ಯ ಪಾರ್ಕ್ ಬಳಿ ಇರುವ ಲಲಿತಾರವರ ಮನೆ ಹಾಗೂ ಅವರಿಗೆ ಸಂಬಂಧಿಸಿದ ಮತ್ತಿತರ ಸ್ಥಳಗಳ ಮೇಲೂ ಲೋಕಾಯುಕ್ತರ ತಂಡ ದಾಳಿ ನಡೆಸಿದ್ದು, ಪರಿಶೀಲನೆಯಲ್ಲಿ ತೊಡಗಿದೆ.
