ಅಂಕಣ ರಾಜಕೀಯ ಸುದ್ದಿ

ಜನಪರ ಯೋಜನೆಗಳ ಜಾರಿಗೆ ತಂದ ಸರಕಾರಕ್ಕೆ ಸಿಕ್ಕ ಗ್ಯಾರಂಟಿ ಗೆಲುವು

Share It

ಸುಳ್ಳು ಹರಡುವ ಬಿಜೆಪಿ ನಾಯಕರಿಗೆ ಬುದ್ದಿ ಕಲಿಸಿದ ಮತದಾರ
‘ಗ್ಯಾರಂಟಿ’ ತಾಕತ್ತು ಏನೆಂದು ಸಾಭೀತು ಪಡಿಸಿದ ಉಪಚುನಾವಣೆ

ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯಭೇರಿ ಭಾರಿಸಿದೆ. ಆ ಮೂಲಕ ಬಿಜೆಪಿಯ ಘಟಾನುಘಟಿ ನಾಯಕರ ಮುಖಭಂಗವಾಗಿದೆ. ರಾಜ್ಯದ ಜನತೆ ನಾವು ನಿಮ್ಮ ಬಣ್ಣದ ಮಾತಿಗೆ ಬೆರಗಾಗುವುದಿಲ್ಲ, ಬಡವರ ಬವಣೆ ಬಲ್ಲವರಿಗೆ, ಬದುಕು ಸುಧಾರಿಸುವ ಯೋಜನೆ ಜಾರಿಗೊಳಿಸುವ ಸರಕಾರಕ್ಕೆ ಬೆಂಬಲ ನೀಡಿಯೇ ನೀಡುತ್ತೇವೆ ಎಂಬ ಉತ್ತರ ಕೊಟ್ಟಿದ್ದಾರೆ.

ಮೂರು ಕ್ಷೇತ್ರದಲ್ಲಿ ಗೆಲುವು ಸಿಕ್ಕಿದ್ದು ಕಾಂಗ್ರೆಸ್ ಪಕ್ಷದ‌ ಸಿದ್ಧಾಂತಕ್ಕೆ, ಸರಕಾರದ ಬದ್ಧತೆಗೆ, ನಮ್ಮ ನಾಯಕರ ಸಮನ್ವಯತೆ, ತಂತ್ರಗಾರಿಕೆ ಮತ್ತು ಸಮಯಪ್ರಜ್ಞೆಗೆ ಎನ್ನಬಹುದು. ಕಾಂಗ್ರೆಸ್ ಸದಾ ಬಡವರ ಪರವಾಗಿ ಕೆಲಸ ಮಾಡುವ ಪಕ್ಷ. ನಮ್ಮ ಸರಕಾರ ಬಡವರು, ಹಿಂದುಳಿದವರ ಏಳಿಗೆಗೆ ಅನೇಕ ಯೋಜನೆಗಳನ್ನು ಘೋಷಿಸಿದೆ. ಅದರಲ್ಲಿ ಪ್ರಮುಖವಾಗಿ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದೆ.

ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಗ್ಯಾರಂಟಿ ಅನುಷ್ಠಾನ ಸಮಿತಿ ರಚನೆ ಮಾಡಿ, ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಮನೆ ಬಾಗಿಲಿಗೆ ತಲುಪುವಂತೆ ಮಾಡಿದೆ. ಇದರ ಪರಿಣಾಮ ಉಪ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದಾರೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ನಾನು ಸ್ವತಃ ಓಡಾಡಿ, ಜನರ ಅಭಿಪ್ರಾಯ ಪಡೆದಿದ್ದೆ. ಅಲ್ಲಿನ ಮಹಿಳೆಯರ ಮಾತುಗಳನ್ನು ಕೇಳಿಯೇ ನನಗೆ ಗ್ಯಾರಂಟಿ ಯೋಜನೆಗಳ ಬಲ ಎಷ್ಟಿದೆ ಎಂಬುದು ಅರಿವಾಯ್ತು.

ಪ್ರತಿ ಮಹಿಳೆ ವರ್ಷಕ್ಕೆ 24,000 ರು. ಗೃಹಲಕ್ಷ್ಮೀ ಹಣ ಪಡೆಯುವ ಮೂಲಕ ಸಬಲೀಕರಣದೆಡೆಗೆ ಸಾಗುತ್ತಿದ್ದರೆ, ತಮ್ಮ ಓಡಾಟಕ್ಕೆ ಬಳಸುತ್ತಿದ್ದ ವಾರ್ಷಿಕ ಸರಾಸರಿ 20,000 ಹಣವನ್ನು ಉಳಿತಾಯ ಮಾಡುತ್ತಿದ್ದಾರೆ. ಉದ್ಯೋಗಸ್ಥ ಮಹಿಳೆಯರಿಗೆ ಶಕ್ತಿ ಯೋಜನೆ ಧೈರ್ಯ ತುಂಬಿದೆ. ಅನ್ನಭಾಗ್ಯ ಯೋಜನೆ ಮನೆಮಂದಿಯ ಹೊಟ್ಟೆ ತುಂಬಿಸಿದೆ. ವಿದ್ಯುತ್ ಬಿಲ್ ಪಾವತಿ ಮಾಡದಿರುವುದರಿಂದ ಆ ಹಣ ಪರ್ಯಾಯವಾಗಿ ಬಳಕೆಯಾಗುತ್ತಿದೆ.

ಹಾಗಾಗಿ, ಪ್ರತಿ ಮಹಿಳೆ ವಾರ್ಷಿಕ 70-80 ಸಾವಿರ ರು‌ ಹಣವನ್ನು ಸರಕಾರದಿಂದ ನೆರವಿನ ರೂಪದಲ್ಲಿ ಪಡೆಯುತ್ತಿದ್ದಾರೆ. ಇದು ಅವರ ಜೀವನಮಟ್ಟ ಸುಧಾರಿಸಿದೆ. ಈ ಕಾರಣಕ್ಕೆ ತಮಗೆ ಕಾಂಗ್ರೆಸ್ ಮೇಲೆ ನಂಬಿಕೆಯಿದೆ ಎಂಬುದನ್ನು ಮತದಾನದ ಮೂಲಕ ಸಾಬೀತು ಮಾಡಿದ್ದಾರೆ. ವಿಪಕ್ಷ ನಾಯಕರು ಹೇಳಿದಂತೆ ಯಾವ ಮಹಿಳೆಯೂ ನಮಗೆ ಗ್ಯಾರಂಟಿ ಬೇಡ ಎಂದು ಹೇಳುತ್ತಿಲ್ಲ. ಗ್ಯಾರಂಟಿ ಯೋಜನೆಗಳನ್ನು ನಾಡಿನ ಮಹಿಳೆಯರು ಮನದುಂಬಿ ಒಪ್ಪಿಕೊಂಡಿದ್ದಾರೆ ಎಂಬುದನ್ನೆ 3 ಉಪಚುನಾವಣೆ ಫಲಿತಾಂಶವೇ ಸಾಕ್ಷಿ.

ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿಯ ರಾಜಕೀಯ ಆರೋಪಗಳಿಗೆ ಜನ ಸೊಪ್ಪು ಹಾಕಿಲ್ಲ. ಮೊದಲಿಗೆ ಮೂಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಹೆಸರು ತಂದು ಅವರನ್ನು ಹಣಿಯುವ ಪ್ರಯತ್ನ ನಡೆಸಿದರು. ವಾಲ್ಮೀಕಿ ಹಗರಣದ ನೆಪದಲ್ಲಿ ಸರಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆಯಿತು. ಇದೆಲ್ಲ ಫಲ ನೀಡದೇ ಇದ್ದಾಗ ‘ವಕ್ಫ್’ ವಿವಾದದ ಮೂಲಕ ಹಿಂದೂಗಳ ಜಮೀನು ಅಪಾಯದಲ್ಲಿದೆ ಎಂಬ ಭಾವನಾತ್ಮಕ ಸುಳ್ಳು ಹರಡಿ, ಒಂದು ಸಮುದಾಯದ ಮೇಲೆ ದ್ವೇಷ ಬಿತ್ತುವ ಕೆಲಸ ಮಾಡಿದರು.

ವಕ್ಫ್ ವಿವಾದವೂ ಅಷ್ಟೊಂದು ಫಲ ಕೊಡದ ಕಾರಣಕ್ಕೆ BPL ಕಾರ್ಡ್ ರದ್ದು ಎಂಬ ಬೃಹತ್ ನಾಟಕ ಆರಂಭವಾಯಿತು. ಆದರೆ, BPL ಕಾರ್ಡ್ ರದ್ದು ಮಾಡಲು ನಿಯಮಾವಳಿ ರೂಪಿಸಿದ್ದೇ ಬಿಜೆಪಿ ಸರಕಾರ ಇದ್ದಾಗ. ಅನರ್ಹರಿಗೆ ಕಾರ್ಡ್ ಕೊಡಬಾರದು ಎಂಬುದು ಅವರದ್ದೇ ಸರಕಾರದ ತೀರ್ಮಾನ. ಅದು ಪರಿಶೀಲನೆ ಮುಗಿದು, ತೆರಿಗೆ ಪಾವತಿ ಮಾಡುವವರು ಮತ್ತು ನಕಲಿ ದಾಖಲೆ ನೀಡಿ ಕಾರ್ಡ್ ಪಡೆದವರ ಕಾರ್ಡ್ ಗಳನ್ನು ಸರಕಾರ ರದ್ದು ಮಾಡಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ನಿರ್ದೇಶನದ ಮೇರೆಗೆ ನಕಲಿ ಕಾರ್ಡ್ ರದ್ದು ಪ್ರಕ್ರಿಯೆ ನಡೆದಿದೆ. ದೇಶದಲ್ಲಿ 5.8 ಕೋಟಿ ಕಾರ್ಡ್ ರದ್ದು ಮಾಡಲು ಕೇಂದ್ರ ಸರಕಾರ ಸೂಚನೆ ನೀಡಿದೆ. ಇನ್ನು ರಾಜ್ಯದಲ್ಲಿ ನಕಲಿ ಕಾರ್ಡ್ ಗಳನ್ನು ಗುರುತಿಸಿ, ರದ್ದುಗೊಳಿಸಲು ಬಿಜೆಪಿ ಸರಕಾರವಿದ್ದಾಗಲೇ ಆದೇಶ ನೀಡಲಾಗಿತ್ತು. ಹೀಗಾಗಿ, ತೆರಿಗೆ ಪಾವತಿದಾರರು, ಸರಕಾರಿ ನೌಕರರು ಬಿಪಿಎಲ್ ಕಾರ್ಡ್ ಪಡೆದಿದ್ದು, ಅದನ್ನೆಲ್ಲ ಪತ್ತೆ ಹಚ್ಚಿ ರದ್ದುಗೊಳಿಸಲು ತೀರ್ಮಾನಿಸಲಾಗಿದೆ. ಅದೇ ಸಮಯದಲ್ಲಿ ಯಾವುದೇ ಅರ್ಹ ಫಲಾನುಭವಿಗೆ ತೊಂದರೆ ಆಗದಂತೆ ಕ್ರಮವಹಿಸಲು ನಮ್ಮ ಸರಕಾರ ಸೂಚನೆ ನೀಡಿದೆ.

ಇನ್ನು ಗ್ಯಾರಂಟಿ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರದ್ದು “ಕುಣಿಯಲಾರದವರು ನೆಲ ಡೊಂಕು ಎಂದರು” ಅನ್ನೋ ಗಾದೆ ಮಾತು ಹೇಳಿ ಮಾಡಿಸಿದಂತಿದೆ. ನಮ್ಮ ಸರಕಾರ ಪಂಚ ಗ್ಯಾರಂಟಿ ಘೋಷಣೆ ಮಾಡಿದಾಗ ಮೊದಲಿಗೆ ಗ್ಯಾರಂಟಿ ಜಾರಿಯಿಂದ ರಾಜ್ಯ ದಿವಾಳಿಯಾಗಲಿದೆ ಎಂದರು. ಶ್ರೀಲಂಕಾ ಮಾದರಿಯ ಅರಾಜಕತೆ ಸೃಷ್ಡಿಯಾಗಲಿದೆ ಎಂದು ಜನರನ್ನು ನಂಬಿಸುವ ಪ್ರಯತ್ನ ನಡೆಸಿದರು.

ಆದರೆ, ಆರ್ಥಿಕ ತಜ್ಞರು ಅಭಿಪ್ರಾಯ ಪಡುವ ಪ್ರಕಾರ
ರಾಜ್ಯದ ಜಿಡಿಪಿ ಪ್ರಮಾಣ ಗ್ಯಾರಂಟಿ ಯೋಜನೆಗಳಿಂದಲೇ ಹೆಚ್ಚಾಗುತ್ತಿದೆ. ದೇಶದ ಎರಡನೇ ಅತಿದೊಡ್ಡ ಜಿಡಿಪಿ ಉತ್ಪಾದನಾ ರಾಜ್ಯವಾಗಿದೆ. ನಮ್ಮ ಜಿಡಿಪಿ ಬೆಳವಣಿಗೆ ಒಟ್ಟಾರೆ, ದೇಶದ ಬೆಳವಣಿಗೆಯ ಪ್ರಮಾಣಕ್ಕಿಂತ ಹೆಚ್ಚಿದೆ ಎಂಬುದು ನಮ್ಮ ಸರಕಾರ ಮತ್ತು ರಾಜ್ಯಸ ಹೆಮ್ಮೆಯ ಸಂಗತಿ.

ಗ್ಯಾರಂಟಿ ಯೋಜನೆಗಳ ಫಲ ಮತ್ತು ನಮ್ಮ ಸರಕಾರದ ಆಡಳಿತ ವೈಖರಿಯನ್ನು ಮೆಚ್ಚಿದ ಜನ ನಮಗೆ ಮತ ನೀಡಿದ್ದಾರೆ. ಅದರ ಫಲವಾಗಿ ಕಳೆದ ನಲವತ್ತು ವರ್ಷದಲ್ಲಿ ರಾಮನಗರ ಜಿಲ್ಲೆ ಜೆಡಿಎಸ್ ಶಾಸಕರಿಲ್ಲದ ಜಿಲ್ಲೆಯಾಗಿದೆ. ಒಂದು ವರ್ಷದ ಹಿಂದೆ ಜೆಡಿಎಸ್ ಶಾಸಕರನ್ನು ಆಯ್ಕೆ ಮಾಡಿದ್ದ ಚನ್ನಪಟ್ಟಣ ಜನತೆ ನಮ್ಮ ಆಡಳಿತ ಮೆಚ್ಚಿ ವರ್ಷದಲ್ಲಿಯೇ ಕಾಂಗ್ರೆಸ್ ಶಾಸಕರನ್ನು ಗೆಲ್ಲಿಸಿದ್ದಾರೆ. ಇನ್ನೂ ಶಿಗ್ಗಾವಿಯಲ್ಲಿ ಮಾಜಿ ಸಿಎಂ ಪುತ್ರನ ಸೋಲಿಸಿ, ಹಿಂದಿನ ಸಿಎಂ ಆಡಳಿತ ವೈಖರಿ ಹೇಗಿತ್ತು ಎಂಬುದಕ್ಕೆ ಜನ ಉತ್ತರ ಕೊಟ್ಟಿದ್ದಾರೆ.

ಇಬ್ಬರು ಮಾಜಿ ಸಿಎಂಗಳು, ಹಾಲಿ ಸಂಸದರ ಕ್ಷೇತ್ರವನ್ನು ಕಳೆದುಕೊಳ್ಳುವುದು ವಿರೋಧ ಪಕ್ಷಗಳ ಪಾಲಿಗೆ ಸಣ್ಣ ವಿಷಯವಿರಬಹುದು. ಆದರೆ, ಕಾಂಗ್ರೆಸ್ ಒಬ್ಬ ಕೇಂದ್ರ ಮಂತ್ರಿ, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಪ್ರಭಾವಿ ರಾಜಕಾರಣಿಯ ಕ್ಷೇತ್ರವನ್ನು ಕಸಿದುಕೊಂಡಿದೆ. ಮತ್ತೊಬ್ಬ ಮಾಜಿ ಸಿಎಂ ಹಾಗೂ ಹಾಲಿ ಸಂಸದ ತಮ್ಮ ಕ್ಷೇತ್ರವನ್ನು ಕಳೆದುಕೊಂಡಿದ್ದರೆ, ಕಾಂಗ್ರೆಸ್ ಎರಡು ಕಡೆ ತನ್ನ ಗೆಲುವಿನ ನಗೆ ಬೀರಿದೆ. ಆ ಮೂಲಕ ತನ್ನ ಬಲವೇನು ಎಂಬುದನ್ನು ಸಾಭೀತು ಪಡಿಸಿದೆ.

ಬಿಜೆಪಿ ಪಕ್ಷ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಈ ನಡುವೆ ಸರಕಾರ ಬೀಳಿಸುವ ಹೇಳಿಕೆಗಳು ಅವರಿಂದ ಬರುತ್ತವೆ. ಆದರೆ, ನಮ್ಮ ಸರಕಾರ ಎಷ್ಟು ಸುಭದ್ರ ಎಂಬುದನ್ನು ಫಲಿತಾಂಶ ತಿಳಿಸಿದೆ. ಸಿಎಂ ಸಿದ್ದರಾಮಯ್ಯ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಚನ್ನಪಟ್ಟಣ ಚುನಾವಣಾ ಉಸ್ತುವಾರಿಯಾಗಿದ್ದ ರಾಮಲಿಂಗಾ ರೆಡ್ಡಿ ಅವರು, ಶಿಗ್ಗಾವಿ ಉಸ್ತುವಾರಿಯಾಗಿದ್ದ ಸತೀಶ್ ಜಾರಕಿಹೊಳಿ ಅವರು, ಸಂಡೂರು ಉಸ್ತುವಾರಿಯಾಗಿದ್ದ ಸಂತೋಷ್ ಲಾಡ್ ಅವರು ಸೇರಿದಂತೆ ಸಚಿವ ಸಂಪುಟದ ಎಲ್ಲ ಸಚಿವರು ಒಗ್ಗಟ್ಟಿನಿಂದ ಹೋರಾಟ ನಡೆಸಿ ಗೆಲುವು ತಂದುಕೊಟ್ಟಿದ್ದಾರೆ.

ನಮ್ಮೊಳಗೆ ಯಾವುದೇ ಕಿತ್ತಾಟವಿಲ್ಲ ಎಂಬುದು ಸಾಭೀತಾಗಿದೆ. ಆದರೆ, ವಿಪಕ್ಷ ನಾಯಕರು, ತಾವು ಮಾಡುವ ಆರೋಪದ ಮೇಲೆ ನಿಗಾವಹಿಸಿ, ಭಾವನಾತ್ಮಕ ಸುಳ್ಳುಗಳನ್ನು ಹೇಳದೆ, ರಚನಾತ್ಮಕ ಟೀಕೆಯ ಮೂಲಕ ಸರಕಾರಕ್ಕೆ ಬುದ್ದಿಮಾತು ಹೇಳದೆ ಪೆದ್ದುಪೆದ್ದಾಗಿ ಹೇಳಿಕೆ ನೀಡಿ ಜನರನ್ನು ದಡ್ಡರನ್ನಾಗಿಸಲು ಪ್ರಯತ್ನಿಸಿದರೆ, ಜನ ತಕ್ಕ ಪಾಠ ಕಲಿಸುತ್ತಾರೆ. ಇದರಿಂದಾದರೂ ಪಾಠ ಕಲಿತು ಸರಕಾರದ ಜತೆ ಕೈಜೋಡಿಸಿ ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡಿ, ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಪ್ರಶ್ನೆ ಮಾಡಲು ನಮ್ಮೊಂದಿಗೆ ನಿಲ್ಲಿ. ಇಲ್ಲವಾದಲ್ಲಿ, ನಿಮಗೆ ಮುಂದೆಂದೂ ರಾಜ್ಯದ ಜನ ಬೆಂಬಲ ನೀಡುವುದಿಲ್ಲ ನೆನಪಿರಲಿ….

ಪ್ರಮೋದ್ ಶ್ರೀನಿವಾಸ್,
ಕಾಂಗ್ರೆಸ್ ಯುವ ಮುಖಂಡರು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು, ಪದ್ಮನಾಭ ನಗರ


Share It

You cannot copy content of this page