ದಲಿತರ ಮೀಸಲಾತಿ ಮಾತ್ರವಲ್ಲ, EWS ಮೀಸಲಾತಿಯೂ ಉಳ್ಳವರ ಪಾಲು: ಆಡಿಟ್ ವರದಿಯ ಸಾರಾಂಶವೇನು?

Share It


ಮಲಪ್ಪುರಂ: SC/ ST ಸಮುದಾಯಗಳಿಗೆ ನೀಡುವ ಮೀಸಲಾತಿ ದುರುಪಯೋಗ ಆಗುತ್ತಿದೆ ಎಂಬ ಆರೋಪವಿದೆ. ಆದರೆ, ಇತ್ತೀಚೆಗೆ ಜಾರಿಯಾದ EWS( ಆರ್ಥಿಕ ಹಿಂದುಳಿದ ವರ್ಗದ ಮೀಸಲಾತಿ) ಕೂಡ BMW ಕಾರು ಹೊಂದಿದವರ ಪಾಲಾಗಿರುವುದು ಕಂಡುಬಂದಿದೆ.

ಕೇರಳದ ಮಲಪ್ಪುರಂ ಜಿಲ್ಲೆಯ ಕೋಟಕ್ಕಲ್ ಪುರಸಭೆ ವ್ಯಾಪ್ತಿಯಲ್ಲಿ ಇಂತಹದ್ದೊಂದು ಹಗರಣ ನಡೆದಿರುವುದನ್ನು ಲೆಕ್ಕಪರಿಶೋಧನೆ ವರದಿ ಬಹಿರಂಗಗೊಳಿಸಿದೆ. ವರದಿಯ ಪ್ರಕಾರ EWS ಮೀಸಲಾತಿ ಅನ್ವಯ BMW ಕಾರು ಹೊಂದಿದ ವ್ಯಕ್ತಿಗಳು ಸೇರಿ ಅನೇಕ ಶ್ರೀಮಂತರು ಯೋಜನೆಯ ಲಾಭ ಪಡೆದುಕೊಂಡಿದ್ದಾರೆ.

ಯೋಜನೆಯ ಫಲಾನುಭವಿಗಳಲ್ಲಿ ಕೆಲವರು ಹವಾನಿಯಂತ್ರಿತ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. 2000 ಚದರಡಿ ಮನೆ ಹೊಂದಿರುವ ಅನೇಕ ಫಲಾನುಭವಿಗಳು ಇದ್ದಾರೆ. ಜತೆಗೆ ಸರಕಾರಿ ಕೆಲಸದಲ್ಲಿರುವವರ ಮನೆಯ ಅನೇಕ ಜನರು ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಕೊಟಕ್ಕಲ್ ಪುರಸಭೆಯ ಒಂದೇ ವಾರ್ಡ್ ವ್ಯಾಪ್ತಿಯಲ್ಲಿ ಇಂತಹ ಅನೇಕ ಪ್ರಕರಣಗಳು ಪತ್ತೆಯಾಗಿದ್ದು, ಇದರ ಹಿಂದೆ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಕುರಿತು ಲೆಕ್ಕಪರಿಶೋಧನೆ ಸಮಿತಿ ಅನುಮಾನ ವ್ಯಕ್ತಪಡಿಸಿದೆ. ಈ ಕುರಿತು ಸಮಗ್ರ ತನಿಖೆಗೆ ಸರಕಾರಕ್ಕೆ ಶಿಫಾರಸು ಮಾಡಿದೆ.

42 ಫಲಾನುಭವಿಗಳ ಪೈಕಿ, 38 ಮಂದಿ ಫಲಾನುಭವಿಗಳು ಯೋಜನೆಯ ಲಾಭ ಪಡೆಯಲು ಅನರ್ಹರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಸರಕಾರ ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವ ಮೀಸಲಾತಿ ಅನ್ವಯ ಅನುದಾನವನ್ನು ಅಧಿಕಾರಿಗಳು ಮತ್ತು ಶ್ರೀಮಂತರು ಸೇರಿ ದುರ್ಬಳಕೆ ಮಾಡಿಕೊಂಡಿದ್ದು, ಇದು ದೇಶಾದ್ಯಂತ ನಡೆಯುತ್ತಿರುವ ಘಟನೆಯಾಗಿದೆ.

ಪ್ರಕರಣ ದಿಂದ ಎಚ್ಚೆತ್ತುಕೊಂಡಿರುವ ಕೇರಳ ಸರಕಾರ ಸಮಗ್ರ ತನಿಖೆ ನಡೆಸಿ, ವರದಿ ನೀಡುವಂತೆ ಸೂಚನೆ ನೀಡಿದೆ. ತನಿಖೆಯಿಂದ ಮತ್ತಷ್ಟು ಅನರ್ಹರು ಪತ್ತೆಯಾಗುವ ಸಾಧ್ಯತೆಯಿದ್ದು, ಸರಕಾರ ಯಾವ ಕ್ರಮ ತೆಗೆದುಕೊಳ್ಳಲಿದೆ ಎಂಬ ಕುರಿತು ಕುತೂಹಲ ಮೂಡಿದೆ.


Share It

You May Have Missed

You cannot copy content of this page