ಗಂಡನನ್ನು ನದಿಯಲ್ಲಿ ಮುಳುಗಿಸಿ ಕೊಂದ ಹೆಂಡತಿ, ಪ್ರಿಯಕರ; ಕೊನೆಗೂ ವರ್ಷದ ಬಳಿಕ ಬಂಧನ
ಬೆಳಗಾವಿ: ಅಥಣಿ ತಾಲೂಕಿನಲ್ಲಿ ಹರಿಯುವ ಕೃಷ್ಣಾ ನದಿಯಲ್ಲಿ ಬರೋಬ್ಬರಿ 11 ತಿಂಗಳ ಹಿಂದೆ ವ್ಯಕ್ತಿಯೊಬ್ಬರನ್ನು ಮುಳುಗಿಸಿ ಕೊಲೆ ಮಾಡಿದ ಪ್ರಕರಣವನ್ನು ಭೇದಿಸುವಲ್ಲಿ ಹಾರೂಗೇರಿ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಶಂಕರ ಗುಳೇದ ಅವರು ಈ ಬಗ್ಗೆ ಮಾಹಿತಿ ನೀಡಿದರು. ಮೃತನ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಮೂವರನ್ನು ಹಾರೂಗೇರಿ ಪೊಲೀಸರು ಬಂಧನ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.
2023 ರ ಡಿಸೆಂಬರ್ 27 ರಂದು ಕೃಷ್ಣಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಈ ನಡುವೆ ರಾಯಬಾಗ ತಾಲೂಕಿನ ಇಟ್ನಾಳ ಗ್ರಾಮದ ಯುವಕನೊಬ್ಬ ಕಾಣೆಯಾಗಿದ್ದ. ಆದರೆ ಆತನ ಬಗ್ಗೆ ಯಾವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರಲಿಲ್ಲ ಎಂದು ತಿಳಿಸಿದರು.
ಪೊಲೀಸರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ತನಿಖೆ ನಡೆಸಿದರು. ಕೊನೆಗೂ ಅದು ಮಲ್ಲಪ್ಪ ಕಂಬಾರ ಅವರ ಶವ ಎನ್ನುವುದು ಗೊತ್ತಾಯಿತು. ಮಲ್ಲಪ್ಪನ ಪತ್ನಿ ದಾನವ್ವ, ಆಕೆಯ ಪ್ರಿಯಕರ ಪ್ರಕಾಶ ಬೆನ್ನಾಳಿ, ರಾಮಪ್ಪ ಮಾದರ ಸೇರಿ ಕೃಷ್ಣಾ ನದಿಯಲ್ಲಿ ಮಲ್ಲಪ್ಪನನ್ನು ಮುಳುಗಿಸಿ ಕೊಲೆಗೈದಿದ್ದರು ಎನ್ನುವುದು ಪೊಲೀಸ್ ತನಿಖೆಯಲ್ಲಿ ಸಾಬೀತುಗೊಂಡಿದೆ.
ಒಂದೂವರೆ ವರ್ಷದ ಹಿಂದೆ ದಾನವ್ವ ಕಾಣೆಯಾದ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದಾನವ್ವಳು ಪ್ರಕಾಶ ಬೆನ್ನಾಳ್ಳಿಯೊಂದಿಗೆ ಓಡಿ ಹೋಗಿದ್ದು ಪತಿ ಮಲ್ಲಪ್ಪಗೆ ಗೊತ್ತಾಗಿದೆ. ಕೆಲದಿನಗಳ ನಂತರ ದಾನವ್ವ ಮನೆಗೆ ವಾಪಸ್ ಬಂದಿದ್ದಳು. ಓಡಿ ಹೋಗಿದ್ದ ವಿಷಯಕ್ಕೆ ಸಂಬಂಧ ಪಟ್ಟಂತೆ ದಂಪತಿಗಳ ನಡುವೆ ದಿನವೂ ಗಲಾಟೆಯಾಗುತ್ತಿತ್ತು.
ತನ್ನ ಪತ್ನಿಯ ಸಹ ಸಂಗ ಬಿಡುವಂತೆ ಪ್ರಕಾಶನಿಗೆ ಮಲ್ಲಪ್ಪ ಎಚ್ಚರಿಕೆ ಕೊಟ್ಟಿದ್ದ. ಕೊನೆಗೂ ಪತಿಗೆ ಗತಿ ಕಾಣಿಸಕು ಮುಂದಾದ ದಾನವ್ವಳು ಪ್ರಕಾಶ ಮತ್ತು ರಾಮಪ್ಪನ ನೆರವಿನೊಂದಿಗೆ ಕಳೆದ ವರ್ಷದ ಡಿಸೆಂಬರ್ ನಲ್ಲಿ ಮಲ್ಲಪ್ಪನನ್ನು ಕೃಷ್ಣಾ ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾರೆ ಎಂದು ತಿಳಿಸಿದರು.