ಶೋಷಿತರ ಬೆಳಕು: ಡಾ.ಬಿ.ಆರ್.ಅಂಬೇಡ್ಕರ್

Oplus_131072

Oplus_131072

Share It

ಹಳ್ಳಿವೆಂಕಟೇಶ್

ಅಸ್ಪ್ರಶ್ಯರ ಬಾಳಿನ ಬೆಳಕು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನಿಸಿದ್ದು 1891 ಏಪ್ರಿಲ್ 14 ರಂದು. ಇವರ ಜೀವನವೇ ಒಂದು ಮರೆಯಲಾಗದ ಚರಿತ್ರೆ. ಅದು ಬರೀ ಚರಿತ್ರೆಯಲ್ಲ ಶೋಷಣೆಯ ಆಳದಿಂದ ಜಿಗಿದು ಬಂದ ಜ್ಞಾನ ಮೂರ್ತಿಯ ವಾಸ್ತವದ ಚರಿತ್ರೆ. ಈ ಮಹಾನ್ ವ್ಯಕ್ತಿಯ ಪರಿ ನಿರ್ವಾಣ ದಿನವನ್ನು ಪ್ರತಿ ವರ್ಷ ಡಿಸೆಂಬರ್ 6 ರಂದು ಆಚರಿಸಲಾಗುತ್ತದೆ. ಇದನ್ನು ಮಹಾಪರಿನಿರ್ವಾಣ ಎಂದು ಕೂಡ ಕರೆಯಲಾಗುತ್ತದೆ.

ಪರಿನಿರ್ವಾಣ ಎಂದರೆ ದೇಹತ್ಯಾಗ, ಆತ್ಮಕ್ಕೆ ಮೋಕ್ಷ, ದೇಹಪರಿತ್ಯಾಗ, ಸಾವು ಎಂಬ ಅರ್ಥಗಳಿವೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ನಿಧನರಾದದು 1956 ಡಿಸೆಂಬರ್ 6 ಇದನ್ನು ಮಹಾಪರಿನಿರ್ವಾಣ ಎಂದು ಕರೆಯುತ್ತಾರೆ. ಬುದ್ದನ ಬಗ್ಗೆ “ಬುದ್ಧ ಮತ್ತು ಧಮ್ಮ’ ಕೃತಿಯನ್ನು ಪ್ರಕಟ ಮಾಡಿದ ಕೆಲವೇ ದಿಗಳಲ್ಲಿ ಅವರು ಮರಣ ಕಿರಣಗಳ ಅಪ್ಪುಗೆಯೊಳಗೆ ಬಂಧಿಯಾಗುತ್ತಾರೆ.

ಲೋಕದಾದ್ಯಂತ ಡಾ.ಅಂಬೇಡ್ಕರ್ ಸಾವು ಒಂದು ಆಚರಣೆಯಾಗಿದ್ದು ನಿಜಕ್ಕೂ ಮಹಾನ್ ವ್ಯಕ್ತಿಯೊಬ್ಬರಿಗೆ ಸಲ್ಲುವ ಗೌರವ ಎಂದರೆ ತಪ್ಪಲ್ಲ. ಅಂಬೇಡ್ಕರ್ ಅವರ ಬದುಕನ್ನ ರೂಪಿಸುವಲ್ಲಿ ಅವರ ಪ್ರಾಥಮಿಕ ಶಾಲೆ ಗುರುಗಳು ಶಿಲ್ಪಿಗಳಾದರೆ , ಅವರ ಬದುಕು ರೂಪಿಸಿದ್ದು ಗ್ರಂಥಾಲಯಗಳು. ಅದರೊಳಗಿನ ಮಹತ್ವದ ಪುಸ್ತಕಗಳು.

ಒಂದು ಕಡೆ ಶೋಷಣೆಯ ಕೆಂಡ ಇನ್ನೊಂದು ಕಡೆ ಜ್ಞಾನದ ಹಸಿವು ಅವರನ್ನು ಹೊಸ ತತ್ವಗಳು ಮೂಳೆಯುವಂತೆ ಮಾಡಿತು. ಸಮಾನತೆ, ಸ್ವಾತಂತ್ರ‍್ಯ ಅವರನ್ನು ಕಾಡಿದ್ದು, ಇವು ನಮ್ಮ ಶೋಷಿತರಿಗೆ ಸಿಗಬೇಕು ಎನ್ನುವ ಹಂಬಲ ಅವರದು. ಈ ಜಾಗೃತತೆಯಿಂದಲೇ ಓದಿ ಪ್ರಸಿದ್ಧ ನ್ಯಾಯವಾದಿಯಾದರು, ರಾಜ್ಯಶಾಸ್ತ್ರಜ್ಞರಾದರು.

ಪ್ರಪಂಚದ ಹಲವಾರು ವಿಶ್ವವಿದ್ಯಾನಿಲಯಗಳು ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಹೃದಯಪೂರ್ವಕವಾಗಿ ಗೌರವಿಸುತ್ತವೆ. ಇದರ ಅರ್ಥ ಜ್ಞಾನಕ್ಕೆ ತಲೆಬಾಗದವರು ಯಾರು ಇಲ್ಲ. ಹಾಗಾಗಿ ಅಂಬೇಡ್ಕರ್ ಶ್ರೇಷ್ಠ ಮನುಷ್ಯನಾಗಿ ಕಾಣುತ್ತಾರೆ.

ಸ್ವಾರ್ಥ ಜಗತ್ತಿನಲ್ಲಿ ನನ್ನದು ನಾನು ಎಂಬ ಭ್ರಮೆಯಲ್ಲಿ ನಮ್ಮ ಕಣ್ಣೆದುರಿನ ಸತ್ಯವನ್ನು ಮತ್ತು ಸಂಕಟಗಳನ್ನು ಮರೆತು ಬಿಡುತ್ತೇವೆ. ಆದರೆ ಅಂಬೇಡ್ಕರ್ ಅವರಿಗೆ ನೊಂದವರ ನೋವೆ ಹೆಚ್ಚು ಕಾಡಿದ್ದರಿಂದ ಅವರು ಮಾನವೀಯ ವ್ಯಕ್ತಿಯಾಗಿ ಶೋಷಿತರನ್ನು ಶೋಷಣೆಯಿಂದ ಮುಕ್ತಿಗೊಳಿಸಲು ಬೃಹತ್ ಸಂವಿಧಾನವನ್ನೇ ಬರೆದುಕೊಟ್ಟರು.

ಸಂವಿಧಾನವನ್ನು ಸರಿಯಾಗಿ ಅರ್ಥೈಸದ ಜನ ಸಂವಿಧಾನದ ವಿರುದ್ದವೂ ಮಾತನಾಡುವುದಕ್ಕೆ ನಿಂತಿದ್ದಾರೆ. ಸಂವಿಧಾನ ಬದಲಾಗಬೇಕು ಎನ್ನುವ‌ ಮತಿಭ್ರಮಿತರಲ್ಲಿ ಇರುವುದು ಶೋಷಣೆಯನ್ನು ಮುಂದುವರಿಸುವ ಚಿಂತನೆಯೇ ಹೊರತು ಬೇರಲ್ಲ.

ಹಿಂದೂ ಧರ್ಮದ ಮೌಢ್ಯಗಳನ್ನು ದಿಕ್ಕರಿಸಿ, ಅವಮಾನದ ಜಾಗದಲ್ಲಿ ನನ್ನ ಚಪ್ಪಲಿಯನ್ನು ಬಿಡುವುದಿಲ್ಲ ಎಂದ ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದರು. ಇವರ ಜೊತೆ ಐದು ಲಕ್ಷ ಜನ ಬೌದ್ಧ ಧರ್ಮಕ್ಕೆ ಮತಾಂತರ ಹೊಂದುತ್ತಾರೆ. ಇದೊಂದು ಧಾರ್ಮಿಕ ಕ್ರಾಂತಿ ಎಂದು ಕರೆಯಬಹುದು.

ಬುದ್ಧನ ಸಾವನ್ನು ಮಹಾಪರಿನರ‍್ವಾಣ ಎಂದು ಕರೆದಂತೆ ಅಂಬೇಡ್ಕರ್ ಸಾವನ್ನು ಅದೇ ಅರ್ಥದಲ್ಲಿ ಕರೆಯಲಾಯಿತು. ಮಹಾಜ್ಞಾನ ವೃಕ್ಷವೊಂದು ಪಂಚಭೂತಗಳಲ್ಲಿ ಲೀನವಾಗಿ ತನ್ನ ನಿಸ್ವಾರ್ಥ ಸೇವೆ ಮತ್ತು ಕೆಲಸಗಳನ್ನು ಇವತ್ತಿಗೂ ನಾವೆಲ್ಲರೂ ಸ್ಮರಿಸಬೇಕಿದೆ.


Share It

You cannot copy content of this page