ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ತೋರಿಸಿ, ಲೈಂಗಿಕ ದೌರ್ಜನ್ಯ: ಫೋಕ್ಸೋ ಪ್ರಕರಣ
ಚಾಮರಾಜನಗರ : ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಡಿ ಗ್ರೂಪ್ ನೌಕರನೊಬ್ಬ ವಿದ್ಯಾರ್ಥಿನಿಯರಿಗೆ ಅಶ್ಲೀಲ ಫೋಟೋ ಮತ್ತು ವೀಡಿಯೋ ತೋರಿಸಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಆರೋಪ ಕೇಳಿಬಂದಿದ್ದು, ಫೋಕ್ಸೋ ಪ್ರಕರಣ ದಾಖಲಾಗಿದೆ.
ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿರುವ ಈ ಘಟನೆಯ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಸಾರ್ವಜನಿಕ ಆಕ್ರೋಶದ ನಂತರ ಎಚ್ಚೆತ್ತುಕೊಂಡಿರುವ ಅಧಿಕಾರಿಗಳು ಆರೋಪಿಯ ವಿರುದ್ಧ ಫೋಕ್ಸೋ ಪ್ರಕರಣ ದಾಖಲಿಸಿ, ನಾಪತ್ತೆಯಾಗಿರುವ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
ನಾಗರಾಜ್ ಎಂಬ ಅರೋಪಿ ವಿದ್ಯಾರ್ಥಿನಿಯರಿಗೆ ತನ್ನ ಮೊಬೈಲ್ ನಲ್ಲಿ ಅಶ್ಲೀಲ ಫೋಟೋ ಹಾಗೂ ವಿಡಿಯೋ ತೋರಿಸುವ ಮೂಲಕ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದು, ಇದನ್ನು ಮಕ್ಕಳು ಪೋಷಕರ ಗಮನಕ್ಕೆ ತಂದಿದ್ದರು. ಪೋಷಕರು ಪ್ರಾಂಶುಪಾಲರಿಗೆ ದೂರು ನೀಡಿದ್ದರೂ, ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಫೋಷಕರು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಶಾಲೆಗೆ ಆಗಮಿಸಿ, ವಿದ್ಯಾರ್ಥಿನಿಯರ ಕೌನ್ಸಿಲಿಂಗ್ ನಡೆಸಿ, ನಾಗರಾಜು ವಿರುದ್ಧ ಫೋಕ್ಸೋ ಪ್ರಕರಣ ದಾಖಲು ಮಾಡಿದ್ದಾರೆ.
ನಾಪತ್ತೆಯಾಗಿರುವ ಆರೋಪಿ ನಾಗರಾಜ್ ಪತ್ತೆಗೆ ಗುಂಡ್ಲುಪೇಟೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಿದ್ಯಾರ್ಥಿಯರ ದೂರಿನ ಅನ್ವಯ ನಾಗರಾಜ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಮಸ್ಯೆಗೆ ಸ್ಪಂದಿಸದ ಪ್ರಾಂಶುಪಾಲ ಗಿರೀಶ್ ಸೇರಿ ಎಲ್ಲ ಶಿಕ್ಷಕರನ್ನು ಬೇರೆಡೆಗೆ ನಿಯೋಜನೆ ಮಾಡಲು ಹಿರಿಯ ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.