39 ನೇ ಬೆಳಗಾವಿ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ-1924
1924 ರಲ್ಲಿ ಬೆಳಗಾವಿಯಲ್ಲಿ 39 ನೇ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಜರುಗಿತು. ಈ ಅಧಿವೇಶನ ಮಹತ್ವ ಪಡೆಯಲು ಕಾರಣವೆಂದರೆ ಈ ಅಧಿವೇಶನದ ಅಧ್ಯಕ್ಷತೆಯನ್ನು ಮಹಾತ್ಮಾ ಗಾಂಧೀಜಿ ವಹಿಸಿದ್ದರು.
ಮಹಾತ್ಮಾ ಗಾಂಧೀಜಿಯವರಿಂದಾಗಿ ಇಂದಿಗೂ ಈ ಅಧಿವೇಶನ ಅವಿಸ್ಮರಣೀಯವೆನಿಸಿದೆ.
1885 ರಲ್ಲಿ ವಿದೇಶಿ ವ್ಯಕ್ತಿ ಏ.ಓ. ಹ್ಯೂಮ್ ಅವರಿಂದ ಸ್ಥಾಪಿಸಲ್ಪಟ್ಟ ರಾಷ್ಟ್ರೀಯ ಕಾಂಗ್ರೆಸ್ ಸಂಘಟನೆ 1923 ರ ತನಕ ಒಟ್ಟಾರೆ 38 ಅಧಿವೇಶನಗಳನ್ನು ನಡೆಸಿತ್ತು.1920 ರಲ್ಲಿ ಕಾಂಗ್ರೆಸ್ ಅಧಿವೇಶನ-ನಾಗಪುರದಲ್ಲಿ ನಡೆದಿತ್ತು. ಇದೇ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ಸಂವಿಧಾನ ಅಂದರೆ ನಿಯಮಾವಳಿಗಳು ರೂಪುಗೊಂಡು ಇಡೀ ರಾಷ್ಟ್ರವನ್ನು ಬೇರೆ ಬೇರೆ ಪ್ರಾಂತಗಳಲ್ಲಿ ಗುರುತಿಸಿದರು. ಆ ಪ್ರಕಾರ ಬೆಳಗಾವಿಯನ್ನು ಕರ್ನಾಟಕ ಪ್ರಾಂತದಲ್ಲಿ ಸೇರಿಸಿದರು. ಆಗ ಅದಕ್ಕೆ ಯಾರ ವಿರೋಧವೂ ಬರಲಿಲ್ಲ ಕಾರಣ ಕನ್ನಡ-ಮರಾಠಿ ವಾದ ವಿವಾದಗಳೇ ಇರಲಿಲ್ಲ.1920 ರವರೆಗೆ ರಾಷ್ಟ್ರದ ಸ್ವಾತಂತ್ರ‍್ಯ ಚಳವಳಿಗಳ ನಾಯಕತ್ವ ಲೋಕಮಾನ್ಯ ತಿಲಕರ ಕಡೆಗೆ ಇತ್ತು. ಅವರ ನಿಧನಾ ನಂತರ ಈ ನಾಯಕತ್ವ ಮಹಾತ್ಮಾ ಗಾಂಧೀಜಿಯವರ ಹೆಗಲಿಗೆ ಬಂತು, 1924 ರಲ್ಲಿ ಬೆಳಗಾವಿಯಲ್ಲಿಕಾಂಗ್ರೆಸ್ ಅಧಿವೇಶನ ಡಿಸೆಂಬರ್ ತಿಂಗಳ 26 ರಿಂದ 30 ರವರೆಗೆ ಜರುಗಿತು.ಆಗ ಬೆಳಗಾವಿ ಮುಂಬಯಿ ಪ್ರಾಂತದಲ್ಲಿ ಸೇರಿತ್ತು. 1818 ರಲ್ಲಿಯೇ ಬೆಳಗಾವಿ ಬ್ರಿಟಿಷರ ಕೈವಶವಾಗಿತ್ತು.ಬೆಳಗಾವಿ ಯಾವಾಗಲೂ-ಯಾವುದೇ ಸಂಸ್ಥಾನಗಳ ಆಡಳಿತಕ್ಕೆ ಒಳಪಟ್ಟಿರಲಿಲ್ಲ. ಅದು ಕೊಲ್ಲಾಪುರ ಅಥವಾ ಸಾತಾರ ಸಂಸ್ಥಾನಗಳ ಆಡಳಿತಕ್ಕೂ ಒಳಪಟ್ಟಿರಲಿಲ್ಲ. ಆದರೆ ಬೆಳಗಾವಿಯ ಭಾಗವೇ ಆಗಿರುವ ಶಹಾಪುರ ಆಗ ಸಾಂಗಲಿ ಸಂಸ್ಥಾನದ ಆಡಳಿತಕ್ಕೆ ಸೇರಿತ್ತು. ಆನಿಗೋಳ, ಮಾಧವಪುರ ವಡಗಾಂವಗಳು ಕುರಂದವಾಡ ಸಂಸ್ಥಾನಗಳ ಭಾಗಗಳಾಗಿದ್ದವು.
ಬೆಳಗಾವಿ 1836 ರ ಪೂರ್ವದಲ್ಲಿ ಮದ್ರಾಸ್ ಪ್ರಾಂತದ ಬಳ್ಳಾರಿ ಜಿಲ್ಲೆಗೆ ಸೇರಿತ್ತು. ನಂತರದಲ್ಲಿ ಅದನ್ನುಮುಂಬಯಿ ಪ್ರಾಂತದಲ್ಲಿ ಸೇರಿಸಿದಾಗ ಧಾರವಾಡ ಜಿಲ್ಲೆಯ ಭಾಗವಾಯಿತು. ನಂತರ ಮತ್ತೆ ಅದನ್ನು ಧಾರವಾಡದಿಂದ ಬೇರ್ಪಡಿಸಿ ಸ್ವತಂತ್ರ‍್ಯ ಬೆಳಗಾವಿ ಜಿಲ್ಲೆ ಮಾಡಿದರು. ವಿಭಾಗೀಯ ಕೇಂದ್ರ ಸ್ಥಳವಾಗಿ ಮಹತ್ವ ಪಡೆಯಿತು. ಮಿಲಟರಿ ಠಾಣೆಯಿಂದ ಇನ್ನಷ್ಟು ಮಹತ್ವ ಪಡೆಯಿತು. 1956 ರಿಂದ ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗವಾಯಿತು.ಬೆಳಗಾವಿಯಲ್ಲಿ 1924 ರ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ನಾಯಕರಾದ ಪಂಡಿತ ಜವಾಹರಲಾಲ ನೆಹರು, ಸರದಾರ ವಲ್ಲಭಭಾಯಿ ಪಟೇಲ, ಸುಭಾಷಚಂದ್ರ ಬೋಸ, ಲಾಲಾ ಲಜಪತರಾಯ್, ರಾಜಗೋಪಾಲಾಚಾರಿ, ಡಾ. ಅನಿಬೆಸೆಂಟ್, ಶ್ರೀಮತಿ ಸರೋಜಿನಿ ನಾಯ್ಡು, ಮದನಮೋಹನ ಮಾಲವೀಯ, ಚಿತ್ತರಂಜನದಾಸ, ಸೈಫುದ್ದೀನ ಖಿಚಲು, ಮೌಲಾನಾ ಅಬ್ದುಲ್ ಕಲಾಮ್ ಆಜಾದ, ಮಹಮ್ಮದ ಅಲಿ, ಶೌಕತ್‌ಅಲಿ, ರಾಜೇಂದ್ರ ಪ್ರಸಾದ, ರಂಗಸ್ವಾಮಿ ಅಯ್ಯಂಗಾರ ಅವರಂಥ ದಿಗ್ಗಜರು ಪಾಲ್ಗೊಂಡಿದ್ದರು. ಈ ಅಧಿವೇಶನ ರಾಷ್ಟ್ರೀಯ ಸ್ವಾತಂತ್ರ‍್ಯ ಚಳವಳಿಗೆ ಹೊಸ ಆಯಾಮ ನೀಡಿತು.
ಗಾಂಧೀಜಿ ಅಧ್ಯಕ್ಷತೆ ವಹಿಸಿ ಕಲ್ಕತ್ತಾ ಒಪ್ಪಂದವನ್ನುಬೆಂಬಲಿಸುವ ಗೊತ್ತುವಳಿ ಕುರಿತು ಮಾತನಾಡಿದರು. ಬೆಳಗಾವಿ ನೆಲದ ಮೇಲೆ ಕಾಲಿಟ್ಟ ಕ್ಷಣ-ಮಹಾತ್ಮಾಗಾಂಧೀಜಿ ಬೆಳಗಾವಿ ನೆಲಮುಟ್ಟಿ ನಮಸ್ಕರಿಸಿದರು.ಈ ಅಧಿವೇಶನ-ಬೆಳಗಾವಿಯ ಇಂದಿನ ಟಿಳಕವಾಡಿ-ಕಾಂಗ್ರೆಸ್ ರೋಡ್‌ಗೆ ಹೊಂದಿಕೊAಡು ಇರುವ ಕಾಂಗ್ರೆಸ್ ಬಾವಿ ಜಾಗದಲ್ಲಿ ಜರುಗಿತು. ಈ ಅಧಿವೇಶನ ನಡೆಸಲು ವ್ಯಾಕ್ಸಿನ್ ಡೆಪೋದಿಂದ-ಮಿಲ್ಟ್ರಿ ಠಾಣೆಯವರೆಗಿನ ಸ್ಥಳ ಗುರುತಿಸಿದ್ದರು. ಅಧಿವೇಶನಕ್ಕೆ ಬರುವ ಪ್ರತಿನಿಧಿಗಳಿಗಾಗಿ ನೀರು ಪೂರೈಸಲು ಬಾವಿ ತೋಡಿದರು. ಅದಕ್ಕೆ ಪಂಪಾ ಸರೋವರ ಎಂದು ಕರೆದರು. ಬಾವಿ ನಿರ್ಮಿಸಲು ತಗುಲಿದ ವೆಚ್ಚ 4370/ ರೂ. 3 ಆಣೆ. ಅಧಿವೇಶನ ನಡೆಸುವ ಸ್ಥಳಕ್ಕೆ `ವಿಜಯನಗರ’ ಎಂದು ನಾಮಕರಣ ಮಾಡಿದರು. ಬಾವಿ ತೋಡುವಾಗ ಹರಪನಹಳ್ಳಿ ಎಂಬ ಬಿದ್ದು ಸತ್ತು ಹೋದ. ಇದು ಅಪಶಕುನ ಇಲ್ಲಿ ಬಾವಿ ಬೇಡ ಎಂದರು.ಮಿಲ್ಟ್ರಿಯವರು ತಮಗೆ ನೀರಿನ ಕೊರತೆಯಾಗಬಹುದು ಎಂದು ಭಾವಿಸಿದರು. ಆದರೆ ಆ ಪ್ರಸಂಗವನ್ನು ಚೆನ್ನಾಗಿ ನಿಭಾಯಿಸಿದ ಗಂಗಾಧರರಾವ್ ದೇಶಪಾಂಡೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು-ಬಾವಿ ನಿರ್ಮಿಸಿದರು.ಇಂದಿಗೂ ಆ ಬಾವಿ ಕಾಂಗ್ರೆಸ್ ಬಾವಿ ಎಂದೇ ಪ್ರಸಿದ್ಧವಾಗಿದೆ. ಈ ಅಧಿವೇಶನದ ತಯಾರಿಗಾಗಿ ಅಧಿವೇಶನದ ಸ್ಥಳದಲ್ಲಿ ಶಾಮಿಯಾನಾ ಹಾಕಿದರು. ವಿಜಯನಗರ ಸಾಮ್ರಾಜ್ಯದ ಹಂಪೆಯ ವಿರೂಪಾಕ್ಷ ಮಂದಿರದ ಕುರುಹುತೋರಿಸುವ 70 ಅಡಿ ಎತ್ತರದ ಗೋಪುರವನ್ನು ಪ್ರವೇಶ ದ್ವಾರದಲ್ಲಿ ನಿರ್ಮಿಸಿದರು. ಅಧಿವೇಶನದ ಸಮೀಪವೇ ರೈಲು ನಿಲ್ದಾಣದ ವ್ಯವಸ್ಥೆ ಮಾಡಲಾಯಿತು.
ಸರ್ಕಸ್ಸುಗಳಿಗಾಗಿ ನಿರ್ಮಿಸುತ್ತಿದ್ದ ಟೆಂಟ್‌ಗಳಂತೆ ಶಾಮಿಯಾನಾ ಹಾಕಿದ್ದರು. ಅದಕ್ಕಾಗಿ 5000/- ರೂ.ಗಳ ಬಾಡಿಗೆ ನಿರ್ಧರಿಸಿದ್ದರಂತೆ, ಬೆಂಕಿ-ಅಪಘಾತದಿಂದ ಪಾರಾಗಲು 500/- ರೂ.ಗಳ ವಿಮೆ ಕೂಡ ಇಳಿಸಿದ್ದರಂತೆ.ಪ್ರತಿನಿಧಿಗಳ ಪ್ರವೇಶ ಫೀ 1 ರೂ. ಮಾತ್ರ, ಇಷ್ಟೆಲ್ಲ ಆದ ಮೇಲೆ ಕೂಡ ಎಲ್ಲ ಖರ್ಚು ವೆಚ್ಚ ಹೋಗಿ 773/- ರೂ.ಗಳು ಉಳಿದು ಲಾಭವಾಯಿತು. ಅದರಲ್ಲಿ 745/-ರೂ. ಬ್ಯಾಂಕಿನಲ್ಲಿಟ್ಟರು. ಕಿರುಕಳ ಖರ್ಚಿಗೆ ಸೆಕ್ರೆಟರಿಯವರ ಹತ್ತಿರ 25/-ರೂ. ಮತ್ತು ಕೋಶಾಧ್ಯಕ್ಷರ ಕಡೆಗೆ 1/-ರೂ. ನೀಡಿದರಂತೆ, ಒಟ್ಟಾರೆ ಈ ಅಧಿವೇಶನಕ್ಕಾಗಿ 2,20,829/- ರೂ-5 ಆಣೆ-6 ದುಡ್ಡು ಖರ್ಚಾದವಂತೆ. ಈ ಅಧಿವೇಶನಕ್ಕೆ ರಾಷ್ಟ್ರದ ಮೂಲೆಮೂಲೆಗಳಿಂದ 1700 ಪ್ರತಿನಿಧಿಗಳು ಆಗಮಿಸಿದ್ದರು. ಮಹಾತ್ಮಾ ಗಾಂಧೀಜಿಯವರಿಗಾಗಿ ವ್ಯಾಕ್ಸಿನ್ ಡಿಪೋ ಇರುವ ಜಾಗದಲ್ಲಿ ವಸತಿಗಾಗಿ ಬಿದಿರಿನಿಂದ ಕುಟೀರ ನಿರ್ಮಿಸಿದ್ದರು. ಅದಕ್ಕೆ ಓರ್ವ ಕುಶಲ ಕಾರ್ಮಿಕಖಿಮಜಿರಾವ್ ಗೋಡಸೆ ಈ ಕುಟೀರ ನಿರ್ಮಿಸಿದ್ದು ಅದಕ್ಕೆ 350/- ರೂ. ವೆಚ್ಚವಾಗಿತ್ತು. ಮಹಾತ್ಮಾ ಗಾಂಧೀಜಿ ಆ ಕುಟೀರ ನೋಡಿ, ಈ ಅರಮನೆಯಂಥ ಕುಟೀರ ನನಗೆ ಬೇಡ ಎಂದು ನಿರಾಕರಿಸಿ ಸರಳ-ಸಾದಾ ಗುಡಿಸಲು ನಿರ್ಮಿಸಲು ಹೇಳಿದರಂತೆ.
ವಿಶಾಲವಾದ ಊಟದ ಹಾಲ್, ಆಡಳಿತದ ಕೇಂದ್ರ ಕಛೇರಿ, ನೂಲುವ-ಕೋಣೆಗಳು, ಮೆಡಿಕಲ್ ಚೆಕ್ಆಪ್ ಕೇಂದ್ರಗಳು, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ವೇದಿಕೆಗಳು, ಸೇವಾ ದಳಗಳು, ಸ್ವಚ್ಛತಾ ಗೃಹಗಳು ಆದಿಯಾಗಿ ಎಲ್ಲ ವ್ಯವಸ್ಥೆ ಮಾಡಲಾಗಿತ್ತು.
ಈ ಅಧಿವೇಶನ ಯಶಸ್ವಿಯಾಗಲು ಬೆಳಗಾವಿ ಜಿಲ್ಲಾ ಮುಖಂಡ ರಾಗಿದ್ದ ಕರ್ನಾಟಕದ ಹುಲಿ ಗಂಗಾಧರರಾವ್ ದೇಶಪಾಂಡೆ, ಸೇವಾದಳದ ಎನ್.ಎಸ್. ಹರ್ಡೀಕರ, ಕಾಕಾ ಕಾಲೇಲಕರ ಮತ್ತು ನೂರಾರು-ಸಾವಿರಾರು ಕಾರ್ಯಕರ್ತರ ಪಡೆ ಶ್ರಮಿಸಿತು. ಅಧಿವೇಶನದ ಕಛೇರಿ ನಿರ್ವಾಹಕರಾಗಿದ್ದ ಭೀಮರಾವ್ ಪೋತದಾರ,ಎಂ.ಆರ್. ಕೆಂಭಾವಿ, ಎಸ್.ಎಲ್. ಸೋಲೋಮನ್, ಎಚ್.ಎಸ್. ಕೌಜಲಗಿ ಅಚ್ಚುಕಟ್ಟಾಗಿ ತಮ್ಮ ಹೊಣೆಗಾರಿಕೆ ನಿರ್ವಹಿಸಿದರು.
ಈ ಅಧಿವೇಶನದ ಪ್ರಾರಂಭಕ್ಕೆ ಸಂಗೀತ ವಿದುಷಿ ಗಂಗೂಬಾಯಿ ಹಾನಗಲ್ಲ ಇವರು ಹುಯಿಲಗೋಳನಾರಾಯಣರಾಯರ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂಬ ನಾಡಗೀತೆಯನ್ನು ಹಾಡುವ ಮೂಲಕ ಕನ್ನಡಿಗರ ಭಾವನೆಗಳಿಗೆ ಧ್ವನಿಯಾದರು. ಅದೇ ಮುಂದೆ ಸ್ವತಂತ್ರ‍್ಯ ಕರ್ನಾಟಕ ರಾಜ್ಯ ಬೇಡಿಕೆಗೆ ಸ್ಫೂರ್ತಿ ನೀಡಿತು.
✒️ಬಿ.ಎಸ್.ಗವಿಮಠ, ಸಾಹಿತಿ, ಬೆಳಗಾವಿ