ವಿಜಯೇಂದ್ರ ಹೈಕಮಾಂಡ್ ಗೆ ವಿರುದ್ಧ ದೂರು : ರೆಬೆಲ್ ಟೀಂ ನಿಂದ ದೆಹಲಿ ದಂಡಯಾತ್ರೆ
ಬೆಂಗಳೂರು: ದೆಹಲಿಯಲ್ಲಿ ಬೀಡುಬಿಟ್ಟಿರುವ ಬಿಜೆಪಿ ರೆಬೆಲ್ ಟೀಂ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಪಟ್ಟುಹಿಡಿದಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿರುವ ರಮೇಶ್ ಜಾರಕಿಹೊಳಿ ಅವರ ನೇತೃತ್ವದ ತಂಡ ವಿಜಯೇಂದ್ರ ವಿರುದ್ಧ ದೂರುಗಳ ಸುರಿಮಳೆಗರೆದಿದೆ. ಜಿಲ್ಲಾಧ್ಯಕ್ಷರ ನೇಮಕದಲ್ಲಿ ತೆಗೆದುಕೊಂಡಿರುವ ಏಕಪಕ್ಷೀಯ ತೀರ್ಮಾನವೂ ಸೇರಿದಂತೆ ಅನೇಕ ವಿಚಾರಗಳಲ್ಲಿ ವಿಜಯೇಂದ್ರ ನಡೆಯನ್ನು ಟೀಕಿಸಿದ್ದಾರೆ.
ಎರಡು ದಿನಗಳ ಹಿಂದೆಯೇ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ, ಶ್ರೀಮಂತ ಪಾಟೀಲ್, ಡಾ.ಕೆ.ಸುಧಾಕರ್ ಸೇರಿದಂತೆ ಅನೇಕ ನಾಯಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಬಸನಗೌಡ ಯತ್ನಾಳ್ ಇಂದು ಮಧ್ಯಾಹ್ನದ ವೇಳೆ ರೆಬೆಲ್ ತಂಡದ ಜತೆಗೂಡಲಿದ್ದು, ನಂತರ ಒಟ್ಟಾಗಿ ಹೈಕಮಾಂಡ್ ಮುಂದೆ ಹಕ್ಕೊತ್ತಾಯ ಮಂಡನೆ ಮಾಡಲಿದ್ದಾರೆ.
ವಿಜಯೇಂದ್ರ ನಡೆದುಕೊಳ್ಳುವ ರೀತಿ ಹಿರಿಯ ನಾಯಕರಿಗೆ ಇರುಸು-ಮುರುಸು ತರಿಸುವ ರೀತಿಯಲ್ಲಿದೆ. ಹೀಗಾಗಿ, ಅವರನ್ನು ನಾಯಕತ್ವದಿಂದ ಕೆಳಗಿಳಿಸಬೇಕು. ಪಕ್ಷಕ್ಕಾಗಿ ದುಡಿಯುವ ನಾಯಕರಿಗೆ ಸೂಕ್ತ ಸ್ಥಾನಮಾನ ಕೊಡಬೇಕೇ ವಿನಃ, ತಮಗೆ ಬೇಕಾದವರಿಗಲ್ಲ, ಈ ಬಗ್ಗೆ ಪಕ್ಷದಲ್ಲಿ ಅಸಮಾಧಾನ ಇರಬಾರದು ಎಂದು ಮನವರಿಕೆ ಮಾಡಿಕೊಡಲು ತೀರ್ಮಾನಿಸಿದ್ದಾರೆ.
ಇದೀಗ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು, ವಿಜಯೇಂದ್ರ ಬಣದ ವಿರುದ್ಧ ಯತ್ನಾಳ್ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ. ಯತ್ನಾಳ್ ಬಣ ಇದೀಗ ದಿನೇದಿನೇ ಬೆಳೆಯುತ್ತಿದ್ದು, ವಿಜಯೇಂದ್ರಗೆ ಇದು ಹಿನ್ನೆಡೆಯಾಗಲಿದೆ. ಒಟ್ಟಾರೆ, ಬಿಜೆಪಿಯ ಬಣ ಬಡಿದಾಟಕ್ಕೆ ಕಡಿವಾಣ ಹಾಕಲು ಹೈಕಮಾಂಡ್ ಯಾವ ರೀತಿಯ ಕ್ರಮ ತೆಗೆದುಕೊಳ್ಳಲಿದೆ ಕಾದು ನೋಡಬೇಕಿದೆ.


