ರಾವಲ್ಪಿಂಡಿ : ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಭಯೋತ್ಪಾದಕರ ಭೀತಿ ಎದುರಾಗಿದೆ. ಐಎಸ್‌ಕೆಪಿ ಭಯೋತ್ಪಾದಕ ಗುಂಪು ಚಾಂಪಿಯನ್ಸ್ ಟ್ರೋಫಿ ವೀಕ್ಷಿಸಲು ಪಾಕಿಸ್ತಾನಕ್ಕೆ ಬಂದಿರುವ ವಿದೇಶಿಗರನ್ನು ಅಪಹರಿಸಲು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದ ಬೆನ್ನಲ್ಲೇ, ನ್ಯೂಜಿಲೆಂಡ್-ಬಾಂಗ್ಲಾದೇಶ್ ನಡುವಿನ ಪಂದ್ಯದ ವೇಳೆ ಭಯೋತ್ಪಾದಕ ನಾಯಕನ ಬೆಂಬಲಿಗನೊಬ್ಬ ಮೈದಾನಕ್ಕೆ ನುಗ್ಗಿದ ಘಟನೆ ನಡೆದಿದೆ.
ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ದ್ವಿತೀಯ ಇನಿಂಗ್ಸ್ ವೇಳೆ ಯುವಕನೋರ್ವ ತೆಹ್ರೀಕ್-ಇ-ಲಬ್ಬೈಕ್ ಪಕ್ಷದ ನಾಯಕ ಸಾದ್ ರಿಝ್ವಿಯ ಫೋಟೋ ಹಿಡಿದು ಮೈದಾನಕ್ಕೆ ನುಗ್ಗಿದ್ದ. ಅಲ್ಲದೆ ನೇರವಾಗಿ ಬ್ಯಾಟ್ ಮಾಡುತ್ತಿದ್ದ ನ್ಯೂಜಿಲೆಂಡ್ ಆಟಗಾರ ರಚಿನ್ ರವೀಂದ್ರ(ಕರ್ನಾಟಕ ಮೂಲದ ಬ್ಯಾಟ್ಸ್‌ಮನ್) ಅವರನ್ನು ತಬ್ಬಿಕೊಳ್ಳಲು ಯತ್ನಿಸಿದ್ದಾರೆ.
ಇದರಿಂದ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ರಚಿನ್ ರವೀಂದ್ರ ಭಯಭೀತರಾದರು. ಅಷ್ಟರಲ್ಲಾಗಲೇ ಮೈದಾನಕ್ಕೆ ಆಗಮಿಸಿದ ಭದ್ರತಾ ಸಿಬ್ಬಂದಿ ಯುವಕನನ್ನು ವಶಕ್ಕೆ ಪಡೆದು, ಕರೆದುಕೊಂಡು ಹೋಗಿದ್ದಾರೆ.
ಭಯೋತ್ಪಾದಕ ಸಾದ್ ರಿಝ್ವಿ: ಕಟ್ಟರ್ ಬಲಪಂಥೀಯ ನಾಯಕರಾಗಿರುವ ಸಾದ್ ರಿಝ್ವಿ ಈ ಹಿಂದಿನಿಂದಲೂ ಉಗ್ರ ಚಟುವಟಿಕೆಗೆ ಗುರುತಿಸಿಕೊಂಡಿದ್ದಾರೆ. ಅದರಲ್ಲೂ 2023ರಲ್ಲಿ ಡಚ್ ಮೂಲದ ರಾಜಕಾರಣಿ ಗೀರ್ಟ್ ವೈಲ್ಡರ್ಸ್ ಹತ್ಯೆ ಮಾಡುವಂತೆ ಬಹಿರಂಗ ಕರೆ ನೀಡಿದ್ದರು.
ಇದಕ್ಕೂ ಮುನ್ನ ಹಿಂದಿನ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ಸರ್ಕಾರವು ತೆಹ್ರೀಕ್-ಇ-ಲಬ್ಬೈಕ್ ಪಕ್ಷವನ್ನು ಭಯೋತ್ಪಾದಕ ಗುಂಪು ಎಂದು ಘೋಷಿಸಿ, ಸಾದ್ ರಿಝ್ವಿಯನ್ನು ಬಂಧಿಸಿದ್ದರು. ಆದರೆ ಆ ಬಳಿಕ ಪಾಕ್ನಲ್ಲಿ ನಡೆದ ಉಗ್ರ ಪ್ರತಿಭಟನೆಯಿಂದ ರಿಝ್ವಿಯನ್ನು ಭಯೋತ್ಪಾದಕರ ಪಟ್ಟಿಯಿಂದ ಕೈ ಬಿಡಬೇಕಾಯಿತು.
ಇದಾದ ಬಳಿಕ ಸಾದ್ ರಿಝ್ವಿ ತನ್ನ ಪ್ರಚೋದನಾಕಾರಿ ಭಾಷಣೆಯೊಂದಿಗೆ ಪಾಕಿಸ್ತಾನದಲ್ಲಿ ತನ್ನ ವರ್ಚಸ್ಸನ್ನು ವರ್ಧಿಸಿದ್ದರು. ಇದೀಗ ಅದೇ ರಿಝ್ವಿ ಫೋಟೋದೊಂದಿಗೆ ರಾವಲ್ಪಿಂಡಿಯಲ್ಲಿ ಯುವಕನೋರ್ವ ಮೈದಾನಕ್ಕೆ ನುಗ್ಗಿರುವುದು ಆತಂಕಕ್ಕೆ ಕಾರಣವಾಗಿದೆ.
ಯುವಕನಿಗೆ ಬ್ಯಾನ್: ಇನ್ನು ಮೈದಾನಕ್ಕೆ ನುಗ್ಗಿದ ಯುವಕನನ್ನು ಬಂಧಿಸಿರುವ ರಾವಲ್ಪಿಂಡಿ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಅಲ್ಲದೆ ಆತನಿಗೆ ಪಾಕಿಸ್ತಾನದ ಎಲ್ಲಾ ಕ್ರಿಕೆಟ್ ಸ್ಥಳಗಳಿಗೆ ಪ್ರವೇಶಿಸುವುದನ್ನು ಶಾಶ್ವತವಾಗಿ ನಿಷೇಧಿಸಲಾಗಿದೆ ಎಂದು ವರದಿಯಾಗಿದೆ.
ಒಟ್ಟಿನಲ್ಲಿ 29 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಿ ನಡೆಯುತ್ತಿದ್ದು, ಈ ಟೂರ್ನಿಯಲ್ಲಿ ಭದ್ರತಾ ಲೋಪ ಕಂಡುಬಂದಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ. ಇದೇ ಕಾರಣದಿಂದಾಗಿ ಭಾರತ ತಂಡ ಪಾಕಿಸ್ತಾನದಲ್ಲಿ ಪಂದ್ಯಾವಳಿ ಆಡಲು ಹಿಂದೇಟು ಹಾಕಿದೆ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ.