ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದಲ್ಲೂ ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ ಹಾಗೂ ಟಿಎಸ್‌ಪಿ (SCSP-TSP) ಅನುದಾನವನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಆರೋಪಿಸುತ್ತಿವೆ.
ವಿಧಾನಪರಿಷತ್ ಕಲಾಪದಲ್ಲಿ ಇಂದು ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನ ಬಳಕೆ ವಿಚಾರವನ್ನು ಪರಿಷತ್ನಲ್ಲಿ ಸದಸ್ಯರಾದ ಹೇಮಲತಾ ನಾಯಕ್ ಹಾಗೂ ಟಿ.ಎ.ಶರವಣ ಪ್ರಸ್ತಾಪಿಸಿದರು.
ಗ್ಯಾರಂಟಿಗಳಿಗೆ ಪ್ರತ್ಯೇಕವಾಗಿ 52 ಸಾವಿರ ಕೋಟಿ ಮೀಸಲಿಟ್ಟಿದ್ದೀರಿ. ಆದರೂ, ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣ ಯಾಕೆ ಅಗತ್ಯವಿದೆ?, ಹಾಗಾದರೆ ಬಜೆಟ್ನಲ್ಲಿ ಮೀಸಲಿಟ್ಟ ಈ ಹಣ ಎಲ್ಲಿಗೆ ಹೋಯ್ತು? ಹೇಳೋದೊಂದು ಮಾಡೋದೊಂದು ಎಂದು ಹೇಮಲತಾ ನಾಯಕ್ ಪ್ರಶ್ನಿಸಿದರು.
ಸಾರಿಗೆ ಬಸ್ಗಳಲ್ಲಿ ಓಡಾಡುವ ಎಸ್ಸಿ, ಎಸ್ಟಿ ಮಹಿಳೆಯರ ಸಂಖ್ಯೆ ಎಷ್ಟು? ಸರ್ಕಾರದ ಬಳಿ ಫಲಾನುಭವಿಗಳ ಸಂಖ್ಯೆಯೇ ಇಲ್ಲ ಅನಿಸುತ್ತದೆ ಎಂದು ಟಿ.ಎ.ಶರವಣ ಪ್ರಶ್ನಿಸಿದರು.
ಹೇಮಲತಾ ನಾಯಕ್ ಮತ್ತು ಟಿ.ಎ ಶರವಣ ಪ್ರಶ್ನೆಗೆ ಸಚಿವ ಮಹದೇವಪ್ಪ ಉತ್ತರ ನೀಡಿದರು. “2011ರ ಜನಗಣತಿ ಪ್ರಕಾರ 21.78 ಲಕ್ಷ ಎಸ್ಸಿ ಕುಟುಂಬಗಳಿವೆ. 8.76 ಲಕ್ಷ ಎಸ್ಟಿ ಕುಟುಂಬಗಳಿವೆ. ಈ ಎಲ್ಲಾ ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆ ಲಭಿಸುತ್ತಿದೆ. 52.10 ಲಕ್ಷ ಎಸ್ಸಿ ಮಹಿಳೆಯರು, 21.42 ಲಕ್ಷ ಎಸ್ಟಿ ಮಹಿಳೆಯರಿಗೆ ಗ್ಯಾರಂಟಿ ಯೋಜನೆ ತಲುಪುತ್ತಿದೆ. ಎಸ್ಸಿ, ಎಸ್ಟಿ ಸಮುದಾಯದ ಹಣವನ್ನು ಬೇರೆ ಯೋಜನೆಗೆ ಬಳಸುವುದಿಲ್ಲ. ಬೇರೆ ಯೋಜನೆಗೆ ಆ ಹಣ ಬಳಸುವ ಪ್ರಮೆಯವೇ ಬರುವುದಿಲ್ಲ” ಎಂದು ಉತ್ತರಿಸಿದರು.
ಸರ್ಕಾರ ಹಾರಿಕೆ ಉತ್ತರವನ್ನು ಕೊಡುತ್ತಿದೆ. ಬೇರೆ ಉದ್ದೇಶಗಳಿಗೆ ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣ ಬಳಸಬಾರದು. ಎಸ್‌ಸಿಎಸ್‌ಪಿ-ಟಿಎಸ್‌ಪಿ ಯೋಜನೆಗೆ ಘೋಷಣೆ ಮಾಡಿದ್ದು 42 ಸಾವಿರ ಕೋಟಿ ರೂ. ಆದರೆ ಸಿಗುತ್ತಿರುವುದು ಕೇವಲ 7 ಸಾವಿರ ಕೋಟಿ ರೂ. ದಲಿತರಿಗೆ ಈ ಸರ್ಕಾರದಿಂದ ಆದಷ್ಟು ಅನ್ಯಾಯ ಬೇರೆ ಯಾರಿಂದಲೂ ಆಗಿಲ್ಲ. ದಲಿತ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರದಿಂದ ಮೋಸ ಆಗುತ್ತಿದೆ. ದಲಿತರಿಗೆ ಮೋಸ ಆಗುತ್ತಿರುವುದನ್ನು ಕೇಳಬಾರದಾ? ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆಸಿದರು.
ಉತ್ತರದ ವೇಳೆ ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿದ ದಾಖಲೆಯನ್ನು ಸರ್ಕಾರ ನೀಡಿದೆ. ಎಸ್‌ಸಿಎಸ್‌ಪಿ-ಟಿಎಸ್‌ಪಿ ಯೋಜನೆಗೆ 2024-25 ರಲ್ಲಿ 42 ಕೋಟಿ ರೂ. ಮೀಸಲು ಇಡಲಾಗಿತ್ತು. ಇದರಲ್ಲಿ 14,282 ಕೋಟಿ ರೂ. ಗ್ಯಾರಂಟಿಗೆ ಮೀಸಲು. ಇದರಲ್ಲಿ 9797 ಕೋಟಿ ರೂ. ಗ್ಯಾರಂಟಿಗೆ ಬಳಕೆ ಮಾಡಲಾಗಿದೆ ಎಂದು ಉತ್ತರ ನೀಡಿದರು
ಎಸ್‌ಸಿಎಸ್‌ಪಿ-ಟಿಎಸ್‌ಪಿ ಹಣವನ್ನು ಗ್ಯಾರಂಟಿ ಬಳಸುವ ವಿಚಾರವಾಗಿ ಆಡಳಿತ ಮತ್ತು ವಿಪಕ್ಷ ನಾಯಕರ ನಡುವೆ ವಾಗ್ವಾದ ನಡೆಯಿತು. ಈ ಹಿನ್ನೆಲೆಯಲ್ಲಿ ಪರಿಷತ್ ಕಲಾಪವನ್ನು ಮತ್ತೆ ಮುಂದೂಡಲಾಗಿತ್ತು.