ಬೆಂಗಳೂರು ನಗರದಲ್ಲಿ ಬಂದ್ ಶಾಂತಿಯುತವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದುವರೆಗೂ ಯಾವುದೇ ಘಟನೆಗಳು ನಡೆದ ಬಗ್ಗೆ ವರದಿಗಳು ಬಂದಿಲ್ಲ. ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದರು.
“ಹಿರಿಯ ಅಧಿಕಾರಿಗಳು ಗಸ್ತಿನಲ್ಲಿ ಇದ್ದಾರೆ. ನಾನೂ ಸಹ ಸಿಟಿ ರೌಂಡ್ಸ್ ಮಾಡಿ ಬಂದಿದ್ದೇನೆ, ಎಲ್ಲಿಯೂ ಸಹ ಅಹಿತಕರ ಘಟನೆಗಳು ನಡೆದಿಲ್ಲ” ಎಂದು ನಗರ ಪೊಲೀಸ್ ಆಯುಕ್ತರು ಹೇಳಿದರು.
‘ಟೌನ್‌ಹಾಲ್ ಮುಂಭಾಗ ಪ್ರತಿಭಟನೆ ಮಾಡಲು ಯತ್ನಿಸಿದ ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದು ಸೇರಿ ಸುಮಾರು 250ಕ್ಕೂ ಹೆಚ್ಚು ಮಂದಿಯನ್ನು ಕರೆದೊಯ್ದು ಫ್ರೀಡಂ ಪಾರ್ಕ್‌ಗೆ ಬಿಡಲಾಗಿದೆ. ಅವರು ಅಲ್ಲಿ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದರು.
ಮುಂಜಾಗೃತಾ ಕ್ರಮವಾಗಿ ನಾವು ಯಾರನ್ನೂ ವಶಕ್ಕೆ ಪಡೆದಿಲ್ಲ, ನಮ್ಮ ಅಧಿಕಾರಿ ಮತ್ತು ಸಿಬ್ಬಂದಿ ಸಂಜೆಯವರೆಗೂ ಬಂದೋಬಸ್ತ್‌ನಲ್ಲಿ ಇರುತ್ತಾರೆ. ಬಲವಂತವಾಗಿ ಅಂಗಡಿ, ಹೋಟೆಲ್‌ಗಳನ್ನು ಮುಚ್ಚಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.