ದಕ್ಷಿಣ ಛತ್ತೀಸ್‌ಗಢದಿಂದ ಮನ್ನಾರ್ ಕೊಲ್ಲಿಯವರೆಗೆ ಟ್ರಫ್ ಇರುವ ಹಿನ್ನೆಲೆಯಲ್ಲಿ ಮುಂದಿನ ಒಂದು ವಾರ ರಾಜ್ಯಾದ್ಯಂತ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಂದು ಮಾರ್ಚ್ 28ರಂದು ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳ ಒಂದೆರಡು ಕಡೆ ಹಾಗೂ ಮಾರ್ಚ್ 29ರಿಂದ 31ರವರೆಗೆ ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಕೆಲವೆಡೆ ಮಳೆಯಾಗಲಿದೆ.
ಇನ್ನು ಏಪ್ರಿಲ್ 1 ಮತ್ತು 2ರಂದು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಹಾವೇರಿ, ಮೈಸೂರು, ಬೆಳಗಾವಿ, ಧಾರವಾಡ, ಗದಗ, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಕೆಲ ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ನಡುವೆ, ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ 4 ಸೆಂ.ಮೀ., ಖಾನಾಪುರ, ಸಂಕೇಶ್ವರ ಮತ್ತು ಬೆಳಗಾವಿಯಲ್ಲಿ ತಲಾ 2 ಸೆಂ.ಮೀ., ಕೊಡಗು ಜಿಲ್ಲೆಯ ನಾಪೋಕ್ಲುವಿನಲ್ಲಿ 5 ಸೆಂ.ಮೀ., ಸೋಮವಾರಪೇಟೆ, ಭಾಗಮಂಡಲ, ಹಾರಂಗಿಯಲ್ಲಿ ತಲಾ 3 ಸೆಂ.ಮೀ ಮತ್ತು ಶಿವಮೊಗ್ಗ ಜಿಲ್ಲೆಯ ಹುಂಚದಕಟ್ಟೆಯಲ್ಲಿ 3 ಸೆಂ.ಮೀ. ಮಳೆಯಾಗಿದೆ.