ಶಿವಮೊಗ್ಗ: ಮೇಯಲು ಹೋಗಿದ್ದ ಹಾಲು ಕೊಡುವ ಹೈಬ್ರೀಡ್ ಹಸುವಿನ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ವಿಕೃತಿ ಮೆರೆದ ಪೈಶಾಚಿಕ ಕೃತ್ಯ ಜಿಲ್ಲೆಯ ಹೊಸನಗರ ತಾಲೂಕಿನ ಬಿಜಾಪುರ ಗ್ರಾಮದಲ್ಲಿ ನಡೆದಿದೆ.
ವಿಜಯಕುಮಾರ್ ಎಂಬ ರೈತನ ಹಾಲು ಕೊಡುವ ಹೈಬ್ರೀಡ್ ಹಸು ಎಂದಿನಂತೆ ಮೇಯಲು ಕಳುಹಿಸಲಾಗಿತ್ತು. ಆದರೆ ದುಷ್ಕರ್ಮಿಗಳು ಈ ಹಸುವಿನ ಕೆಚ್ಚಲು ಕೊಯ್ದು ಹೇಯಕೃತ್ಯ ನಡೆಸಿದ್ದಾರೆ.
ಬಳಿಕ ರಕ್ತ ಸುರಿಸಿಕೊಂಡು ಮನೆಗೆ ಬಂದ ಹಸುವನ್ನು ನೋಡಿದ ಕುಟುಂಬಸ್ಥರು ಗಾಬರಿಗೊಂಡು ಕೂಡಲೇ ಪಶುವೈದ್ಯರನ್ನು ಕರೆದು ಚಿಕಿತ್ಸೆ ಕೊಡಿಸಿದ್ದಾರೆ. ಈ ಬಗ್ಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ಜಿಲ್ಲೆಯ ಹಲವೆಡೆ ಇಂತಹ ಕೃತ್ಯಗಳು ನಡೆಯುತ್ತಿದ್ದು, ರೈತರು ಮತ್ತು ಹೈನೋತ್ಪಾದಕರು ಭಾರೀ ಆತಂಕಗೊಂಡಿದ್ದಾರೆ.