ಉತ್ತರ ಭಾರತೀಯರಿಗೆ ನೆಲದ ಕಾನೂನಿನ ಮೇಲೆ ಸಿಟ್ಟು : ನ್ಯಾಯಾಲಯದ ಆದೇಶ ಮೀರಿ ಬೈಕ್ ಸೇವೆ ಆರಂಭ
ಬೆಂಗಳೂರು: ಉತ್ತರ ಭಾರತೀಯರಿಗೆ ರಾಜ್ಯದ ಜನರ ಭಾವನೆಗಳಿಗೆ ಮಾತ್ರವಲ್ಲ, ನೆಲದ ಕಾನೂನಿಗೂ ಬೆಲೆ ಕೊಡುವುದಿಲ್ಲ ಎಂಬುದು ಮತ್ತೊಮ್ಮೆ ಸಾಭೀತಾಗಿದೆ.
ರಾಜ್ಯದ ಆಟೋ ಮತ್ತು ಟ್ಯಾಕ್ಸಿ ಚಾಲಕರ ಹೊಟ್ಟೆ ಮೇಲೆ ಹೊಡೆದು ಅಕ್ರಮವಾಗಿ ಆರಂಭಿಸಿದ್ದ ಬೈಕ್ ಟ್ಯಾಕ್ಸಿ ಸೇವೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಇದೀಗ ಈ ಬೈಕ್ ಟ್ಯಾಕ್ಸಿ ಕಂಪನಿಗಳು ನ್ಯಾಯಾಲಯದ ಆದೇಶದ ನಡುವೆಯೂ, ಸರಕಾರದ ನಿಯಮ ಉಲ್ಲಂಘನೆ ಮಾಡಿ, ಬೈಕ್ ಟ್ಯಾಕ್ಸಿ ಸೇವೆಯನ್ನು ಅನಾಮತ್ತು ಆರಂಭಿಸುವ ಮೂಲಕ ನೆಲದ ಕಾನೂನನ್ನು ಉಲ್ಲಂಘಿಸಿವೆ.
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಸಂಬಂಧಿಸಿ ನ್ಯಾಯಾಲಯ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸರಕಾರಕ್ಕೆ ನಾಲ್ಕು ವಾರಗಳ ಗಡುವು ನೀಡಿದ್ದರೂ, ನಿಯಮಬಾಹಿರ ಕಾರ್ಯಾಚರಣೆ ಮೂಲಕ ಕಂಪನಿಗಳು ನ್ಯಾಯಾಂಗ ನಿಂದನೆ ಜತೆಗೆ ಸರಕಾರದ ನಿಯಮ ಉಲ್ಲಂಘನೆ ಮಾಡಿವೆ.
ಹೈಕೋರ್ಟ್ ರಾಜ್ಯದಲ್ಲಿ ನಿಯಮಬಾಹಿರವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಓಲಾ, ಊಬರ್ ಮತ್ತು ರಾಫಿಡ್ ಟ್ಯಾಕ್ಸಿ ಸೇವೆಯನ್ನು ಸಂಪೂರ್ಣ ರದ್ದುಗೊಳಿಸುವಂತೆ ಸರಕಾರಕ್ಕೆ ಆದೇಶ ನೀಡಿತ್ತು. ಆದೇಶದ ಅನ್ವಯ ಸರಕಾರ ಕ್ರಮ ತೆಗೆದು ಕೊಂಡಿದ್ದು, ಬೈಕ್ ಟ್ಯಾಕ್ಸಿ ಸೇವೆಗೆ ಕಡಿವಾಣ ಹಾಕಿತ್ತು. ಇದನ್ನು ಪ್ರಶ್ನಿಸಿ ಕಂಪನಿಗಳು ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ ಅರ್ಜಿ ಸಲ್ಲಿಸಿದರು.
ಉಖ್ಯ ನ್ಯಾಯಮೂರ್ತಿಗಳ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠ, ಈ ಕುರಿತು ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸರಕಾರಕ್ಕೆ ನಾಲ್ಕು ವಾರಗಳ ಗಡುವು ನೀಡಿದೆ. ಆದರೆ, ಸರಕಾರ ಇನ್ನೂ ಆ ತೀರ್ಪಿನ ಪ್ರತಿಯನ್ನು ಪರಿಶೀಲನೆ ನಡೆಸುವ ಮೊದಲೇ ಬೈಕ್ ಸೇವೆಯನ್ನು ಆರಂಭಿಸುವ ಮೂಲಕ ಕಂಪನಿಗಳು ನ್ಯಾಯಾಂಗದ ಆದೇಶ ಉಲ್ಲಂಘನೆ ಮಾಡಿವೆ.
ನ್ಯಾಯಾಲಯದ ಆದೇಶಕ್ಕೂ ಕಿಮ್ಮತ್ತು ನೀಡದೆ ನಡೆದುಕೊಳ್ಳುವ ಇಂತಹ ಕಂಪನಿಗಳ ವಿರುದ್ಧ ನ್ಯಾಯಾಲಯ ಕ್ರಮ ತೆಗೆದುಕೊಳ್ಳಬೇಕು. ಸರಕಾರ ಇಂತಹ ಕಂಪನಿಗಳು ಮತ್ತೊಮ್ಮೆ ಕಾರ್ಯಾಚರಣೆ ಮಡೆಸುವ ಅವಕಾಶ ನೀಡದೆ, ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಆಟೋ ಮತ್ತು ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘ ಒತ್ತಾಯಿಸಿದೆ.
ನೆಲದ ಕಾನೂನಿಗೆ ಬೆಲೆ ನೀಡದ ಇಂತಹ ಕಂಪನಿಗಳಿಗೆ ಮತ್ತೊಮ್ಮೆ ರಾಜ್ಯದಲ್ಲಿ ಅವಕಾಶ ನೀಡಿದ್ದಲ್ಲಿ ಸರಕಾರದ ವಿರುದ್ದ ದೊಡ್ಡ ಮಟ್ಟದ ಹೋರಾಟ ನಡೆಸಲಾಗುತ್ತದೆ. ನ್ಯಾಯಾಲಯ ಕೂಡ ಇಂತಹ ನಿಯಮಬಾಹಿರ ಸಂಸ್ಥೆಗಳಿಗೆ ಅವಕಾಶ ನೀಡದಂತೆ ಸೂಕ್ತ ಆದೇಶ ನೀಡಬೇಕು. ನಿಯಮ ಉಲ್ಲಂಘನೆ ಮಾಡಿ ಕಾರ್ಯಚರಣೆ ಆರಂಭಿಸಿರುವ ರಾಫಿಡೋ ಬೈಕ್ಸ್ ಮಾಲೀಕ ಪವನ್ ಎಂಬಾತನನ್ನು ಬಂಧಿಸಬೇಕು. ಇವರೆಲ್ಲ ರಾಜ್ಯದಲ್ಲಿ ಇದ್ದ ಮೇಲೆ ರಾಜ್ಯದ ಕಾನೂನಿಗೆ ಬೆಲೆ ಕೊಡಬೇಕು. ಇಲ್ಲವಾದಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಕನ್ನಡ ಪರ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.