ಬೆಂಗಳೂರು: ಸೆ.7 ರಂದು ಆಗಸದಲ್ಲಿ ರಕ್ತಚಂದ್ರಗ್ರಹಣ ಗೋಚರಿಸಿದ್ದು, ಸುಮಾರು ಐದು ಗಂಟೆ ಕಾಲ ಶಶಿಯ ಅಂದಕ್ಕೆ ಭೂಮಿ ಭಂಗ ತರಲಿದೆ. ಇಂದಿನ ರಕ್ತ ಚಂದಿರನ ದರ್ಶನ ಭಾರತದಲ್ಲೂ ಸಿಗಲಿದ್ದು, ಗ್ರಹಣದ ಹಿನ್ನೆಲೆ ಇಂದು ಹಲವು ದೇಗುಲಗಳಲ್ಲಿ ದರ್ಶನ ನಿಷೇಧಿಸಿದ್ದು, ಪೂಜೆ, ದರ್ಶನ ಸಮಯದಲ್ಲಿ ಬದಲಾವಣೆ ಆಗಲಿದೆ.
ಬೆಂಗಳೂರಿನ ನೆಹರು ಪ್ಲಾನಿಟೋರಿಯಂನಲ್ಲೂ ಚಂದ್ರಗ್ರಹಣ ವೀಕ್ಷಣೆಗೆ ಅವಕಾಶ ಸಿಗಲಿದೆ.
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ರಾತ್ರಿ 9 ಗಂಟೆಗೆ ಬಂದ್ ಆಗಲಿದೆ. ಗ್ರಹಣ ಆರಂಭ, ಅಂತ್ಯ ಕಾಲದಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಈ ವೇಳೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ ರಾತ್ರಿ 8 ಗಂಟೆಗೆ ಬಂದ್ ಆಗುತ್ತೆ. ಹಾಗೇ, ಕೊಪ್ಪಳದ ಹುಲಿಗೆಮ್ಮ, ಅಂಜನಾದ್ರಿಯಲ್ಲಿ ಸಂಜೆ 5 ರ ಬಳಿಕ ದರ್ಶನ ಇರುವುದಿಲ್ಲ.
ಹೊರನಾಡು ಅನ್ನಪೂರ್ಣೇಶ್ವರಿ ಗುಡಿಯಲ್ಲಿ ಮಧ್ಯಾಹ್ನ 3 ಕ್ಕೆ ಅನ್ನದಾನ ಸ್ಥಗಿತ ಆಗಲಿದೆ. ಉಡುಪಿ ಕೃಷ್ಣ ಮಠದಲ್ಲಿ ಬೆಳಗ್ಗೆ 10.30ರಿಂದ 12 ಗಂಟೆ ಒಳಗೆಯೇ ಪ್ರಸಾದ ವ್ಯವಸ್ಥೆ ಮುಕ್ತಾಯ ಮಾಡಲಾಗುತ್ತೆ. ಇನ್ನು, ಚಿಕ್ಕಬಳ್ಳಾಪುರದ ಪ್ರಮುಖ ದೇಗುಲಗಳು ಇಂದು ಸಂಜೆ 4 ಗಂಟೆಗೆ ಬಂದ್ ಆಗಲಿವೆ.
ಕೋಲಾರ ಜಿಲ್ಲೆಯಲ್ಲಿ ಮಧ್ಯಾಹ್ನದ ಬಳಿಕ ದೇಗುಲಗಳ ಬಾಗಿಲಿಗೆ ಬೀಗ ಬೀಳಲಿದೆ. ಹಾಸನದ ಬೇಲೂರಿನ ಚನ್ನಕೇಶವ ದೇಗುಲ ಮಧ್ಯಾಹ್ನದ 3.30 ಕ್ಕೆ ಕ್ಲೋಸ್ ಆಗುತ್ತೆ. ಹಾಗೇ, ಮಡಿಕೇರಿ ಓಂಕಾರೇಶ್ವರ ದೇಗುಲ, ತಲಕಾವೇರಿ ಸನ್ನಿಧಿ ಸಂಜೆ 5 ಕ್ಕೆ ಬಂದ್ ಆಗಲಿದೆ.
ಇಂದು ಚಂದ್ರಗ್ರಹಣ ಹಿನ್ನೆಲೆ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಆತ್ಮಲಿಂಗದ ದರ್ಶನದಲ್ಲಿ ಬದಲಾವಣೆ ಮಾಡಲಾಗಿದೆ. ಗ್ರಹಣ ಕಾಲದ ರಾತ್ರಿ 9.45 ರಿಂದ ಮಧ್ಯರಾತ್ರಿ 1.26 ರವರೆಗೆ ಆತ್ಮಲಿಂಗದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಮಾದಪ್ಪಗೆ ಗ್ರಹಣ ತಟ್ಟಲ್ಲ, ಹೀಗಾಗಿ ಇಂದು ಎಂದಿನಂತೆಯೇ ದರ್ಶನ ಇರಲಿದೆ. ಗ್ರಹಣದ ಸಂದರ್ಭದಲ್ಲಿ ಸಾಮಾನ್ಯವಾಗಿ ಇತರೆ ದೇವಾಲಯಗಳು ಮುಚ್ಚಲ್ಪಡುತ್ತವೆ. ಆದರೆ, ಗ್ರಹಣದ ವೇಳೆ ಮಾದೇಶ್ವರನಿಗೆ ತ್ರಿಕಾಲ ಪೂಜೆ, ಭಕ್ತರಿಗೆ ದರ್ಶನ ಇರುತ್ತೆ. ಆ ಮೂಲಕ ಮಾದಪ್ಪನ ಬೆಟ್ಟದಲ್ಲಿ ವಿಶಿಷ್ಟ ಪರಂಪರೆ ಇದೆ.