ಅಪರಾಧ ಸುದ್ದಿ

Bagalkote: ಕುಡಿದು ಗಲಾಟೆ: ಡೀಸೆಲ್ ಸುರಿದು, ಬೆಂಕಿ ಹಚ್ಚಿ ಮಗನ ಕೊಲೆ

Share It


ಬಾಗಲಕೋಟೆ: ಕುಡಿದು ಗಲಾಟೆ ಮಾಡುತ್ತಿದ್ದ ಮಗನಿಗೆ ಕುಟುಂಬಸ್ಥರೇ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಜಮಖಂಡಿ ತಾಲೂಕಿನ ಬಿದರಿ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ.

ಡೀಸೆಲ್ ಸುರಿದು ಬೆಂಕಿ ಹಚ್ಚಿ ಅನಿಲ್ ಪರಪ್ಪ ಕಾನಟ್ಟಿ(32) ಎಂಬಾತನನ್ನು ಕೊಲೆ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿ ತಂದೆ ಪರಪ್ಪ ಕಾನಟ್ಟಿ, ತಾಯಿ ಶಾಂತಾ ಕಾನಟ್ಟಿ ಮತ್ತು ಸೋದರ ಬಸವರಾಜ ಕಾನಟ್ಟಿ ಎಂಬುವವರನ್ನು ಬಂಧಿಸಲಾಗಿದೆ.

ಘಟನೆ ಸೆಪ್ಟೆಂಬರ್ 5 ರಂದೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅನಿಲ್ ದುಶ್ಚಟಕ್ಕೆ ದಾಸನಾಗಿದ್ದ. ಆನ್​ಲೈನ್​ ಬೆಟ್ಟಿಂಗ್, ಕುಡಿತ, ಮೋಜು ಮಸ್ತಿಗಾಗಿ 20 ಲಕ್ಷ ರೂ ಸಾಲ ಮಾಡಿದ್ದ. ಕುಟುಂಬ ಆತನ ಸಾಲ ಕೂಡ ತೀರಿಸಿತ್ತು. ಬಳಿಕ ಮತ್ತೆ ಐದು ಲಕ್ಷ ರೂ ಹಣ ಕೇಳುತ್ತಿದ್ದ. ತನ್ನ ಪಾಲಿನ ಆಸ್ತಿ ನೀಡುವಂತೆ ನಿತ್ಯ ಜಗಳ ಮಾಡುತ್ತಿದ್ದ.

ಮಗನಿಗೆ ಆಸ್ತಿ ಕೊಟ್ಟರೆ ಅದನ್ನು ಮಾರಾಟ ಮಾಡುತ್ತಾನೆ ಎಂದು ಕೊಟ್ಟಿರಲಿಲ್ಲ. ಆತನ ಮದುವೆ ಮಾಡಿ ನಂತರ ಆಸ್ತಿ ಕೊಡಲು ತಂದೆ-ತಾಯಿ ಹಾಗೂ ಸಹೋದರ ಮುಂದಾಗಿದ್ದರು. ಆದರೆ, ಅನಿಲ್​ ನಿತ್ಯ ಕಾಟ ಕೊಡುವುದು, ಜಗಳ ಮಾಡುವುದು ಮಾತ್ರ ತಪ್ಪಿರಲಿಲ್ಲ. ಕೊಲೆಯಾಗುವ ದಿನದಂದು ಕೂಡ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡಿದ್ದ.

ಅನಿಲ್​​ನ ಸಹೋದರ ಬಸವರಾಜ ಕಾನಟ್ಟಿ ಓರ್ವ ಯೋಧ. ರಜೆಗೆ ಅಂತ ಊರಿಗೆ ಬಂದಿದ್ದ. ಆತನ ಜತೆಗೂ ಜಗಳ ಮಾಡಿದ್ದಾನೆ. ನನ್ನ ಆಸ್ತಿ ಕೊಡದಿದ್ದರೆ ನಿಮ್ಮನ್ನು ಸಾಯಿಸುತ್ತೇನೆ ಎಂದು ಕೈಗೆ ಸಿಕ್ಕ ವಸ್ತುಗಳಿಂದ ತಂದೆ-ತಾಯಿ ಮತ್ತು ಸಹೋದರನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಪರಿಸ್ಥಿತಿ ಕೈ ಮೀರಿದಾಗ ಅನಿಲ್​​​​​ನ ಕೈ, ಕಾಲಿಗೆ ಹಗ್ಗ ಕಟ್ಟಿ ಕೊಲೆ ಮಾಡಿದ್ದಾರೆ. ನಂತರ ಡೀಸೆಲ್ ಹಾಕಿ ಸುಟ್ಟಿದ್ದಾರೆ.
ಸಾವಳಗಿ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share It

You cannot copy content of this page