ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಚಾರ್ಲಿ ಕಿರ್ಕ್ (೩೧) ಅವರನ್ನು ಬುಧವಾರ ಉಟಾಹ್‌ನಲ್ಲಿ ನಡೆದ ಕಾಲೇಜು ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಭಾಷಣ ಮಾಡುತ್ತಿರುವಾಗ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಚಾರ್ಲಿ ಕಿರ್ಕ್ ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಸ್ವಲ್ಪ ಸಮಯದ ನಂತರ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ನಲ್ಲಿ ಚಾರ್ಲಿ ಕಿರ್ಕ್ ಅವರ ಸಾವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೃಢಪಡಿಸಿದ್ದಾರೆ. ಈ ಕೊಲೆ ಅಮೆರಿಕದಾದ್ಯಂತ ರಾಜಕೀಯ ಹಿಂಸಾಚಾರದ ಬೆದರಿಕೆ ಬಗ್ಗೆ ಎಲ್ಲರ ಗಮನಸೆಳೆದಿದೆ. ಯುವ ರಿಪಬ್ಲಿಕನ್ ಮತದಾರರನ್ನು ಒಗ್ಗೂಡಿಸುವಲ್ಲಿ ಚಾರ್ಲಿ ಕಿರ್ಕ್ ಪ್ರಭಾವಶಾಲಿ ಪಾತ್ರ ವಹಿಸಿದ್ದಾರೆ. ಕಿರ್ಕ್ ಇಸ್ರೇಲ್‌ನ ಕಟ್ಟಾ ಬೆಂಬಲಿಗರೂ ಆಗಿದ್ದರು.
ಆಪ್ತ ಚಾರ್ಲಿ ಕಿರ್ಕ್ ಸಾವಿನ ಹಿನ್ನೆಲೆ ಸೆಪ್ಟೆಂಬರ್ ೧೪ರಂದು ಯುಎಸ್ ಮತ್ತು ಉಟಾಹ್ ಧ್ವಜಗಳನ್ನು ಅರ್ಧಕ್ಕೆ ಹಾರಿಸಲು ಉಟಾಹ್ ಗವರ್ನರ್ ಸೂಚಿಸಿದ್ದಾರೆ.
ಪೊಲೀಸರು ಒಬ್ಬ ಶಂಕಿತನನ್ನು ಬಂಧಿಸಿದ್ದಾರೆ. ನಂತರ ಅಧಿಕಾರಿಗಳು ನಿಜವಾದ ದಾಳಿಕೋರ ಇನ್ನೂ ತಲೆಮರೆಸಿಕೊಂಡಿದ್ದಾನೆ ಎಂದು ಸ್ಪಷ್ಟಪಡಿಸಿದರು. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಗುರುವಾರ ಉಟಾಹ್‌ಗೆ ಭೇಟಿ ನೀಡಲಿದ್ದಾರೆ. ವ್ಯಾನ್ಸ್ ಅವರನ್ನು ಕಿರ್ಕ್ಗೆ ತುಂಬಾ ಹತ್ತಿರವೆಂದು ಪರಿಗಣಿಸಲಾಗಿದೆ.